ಶಾಸಕರ ಅಮಾನತು ಸದನದ ತೀರ್ಮಾನ ; ನನ್ನೊಬ್ಬನ ತೀರ್ಮಾನವಲ್ಲ - ವಿಧಾನಸಭಾಧ್ಯಕ್ಷ ಯು. ಟಿ. ಖಾದರ್

ಅಮಾನತಾದವರಿಗೆ ತಪ್ಪಿನ ಅರಿವಾಗಬೇಕು. ಇದು ಶಿಕ್ಷೆಯಲ್ಲ. ಮುಂದೆ ಉತ್ತಮ ನಾಯಕರಾಗಿ ಬೆಳೆಯುವುದಕ್ಕೆ ಶಾಸಕರಿಗೆ ಕೊಟ್ಟಿರುವ ಸವಾಲು ಎಂದು ವಿಧಾನ ಸಭಾ ಅಧ್ಯಕ್ಷ ಯು. ಟಿ ಖಾದರ್ ಹೇಳಿದ್ದಾರೆ.;

Update: 2025-04-27 09:15 GMT

ವಿಧಾನಸಭೆ ಅಧಿವೇಶನದ ವೇಳೆ  ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಶಾಸಕರ ಅಮಾನತು ಸದನದ ತೀರ್ಮಾನ. ಆದ್ದರಿಂದ ಅವರ ಅಮಾನತು ಹಿಂಪಡೆಯುವ ವಿಚಾರವನ್ನು ನಾನೊಬ್ಬನೇ ತೀರ್ಮಾನ ಮಾಡಲಾಗದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೀಠದ ಗೌರವ ಉಳಿಸುವ ಸಲುವಾಗಿ ಆರು ತಿಂಗಳವರೆಗೆ ಅಮಾನತು ಮಾಡಲಾಗಿದೆ. ಸಮಿತಿಯ ಯಾವುದೇ ಸಭೆಯಲ್ಲೂ ಭಾಗವಹಿಸಬಾರದು ಎಂದು ಅದೇಶಿಸಲಾಗಿದೆ. ಅಮಾನತಾದವರಿಗೆ ತಪ್ಪಿನ ಅರಿವಾಗಬೇಕು. ಇದು ಶಿಕ್ಷೆಯಲ್ಲ. ಮುಂದೆ ಉತ್ತಮ ನಾಯಕರಾಗಿ ಬೆಳೆಯುವುದಕ್ಕೆ ಶಾಸಕರಿಗೆ ಕೊಟ್ಟಿರುವ ಸವಾಲು ಎಂದು ವ್ಯಾಖ್ಯಾನಿಸಿದ್ದಾರೆ.

ಶಾಸಕರ ಅಮಾನತುಗೊಳಿಸಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ವಿರುದ್ಧ ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆ ವಿರುದ್ಧ ಹಕ್ಕುಚ್ಯುತಿಗೆ ಕೆಲ ಕಾಂಗ್ರೆಸ್ ಶಾಸಕರು ದೂರು ನೀಡಿದ್ದಾರೆ. ಹಕ್ಕುಚ್ಯುತಿ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದ ಅವರು, 'ಕೆಲ ಶಾಸಕರಿಗೆ ಏನಾದರೂ ಮಾತನಾಡುವ ಚಾಳಿ ಇದೆ. ತಮಗೆ ಪ್ರಚಾರ ಸಿಗುತ್ತದೆ ಎಂದು ಆ ರೀತಿ ಮಾತನಾಡುತ್ತಾರೆ. ಅವರ ಹೇಳಿಕೆ ಸಂವಿಧಾನಕ್ಕೆ ಬದ್ಧವಾಗಿರಬೇಕು ಎಂದು ತಿರುಗೇಟು ನೀಡಿದ್ದಾರೆ.

ವಿಧ್ವಂಸಕ ಕೃತ್ಯ ಬೆಂಬಲಿಸಿದವರ ಮಟ್ಟ ಹಾಕಬೇಕು

ಪಹಲ್ಗಮ್ ಉಗ್ರರ ದಾಳಿ ಪ್ರಕರಣದಲ್ಲಿ ಸಂಚುಕೋರರಿಗೆ ಸಹಾಯ ಮಾಡಿದವರನ್ನು ಮಟ್ಟ ಹಾಕಬೇಕು. ಕೃತ್ಯ ಎಸಗಿದರನ್ನು ಶಿಕ್ಷಿಸಬೇಕು ಎಂದು ಯು. ಟಿ. ಖಾದರ್ ಹೇಳಿದ್ದಾರೆ.

ಯುದ್ಧ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದ ಏಕತೆ, ಒಗ್ಗಟ್ಟು ಮುರಿಬೇಕೆಂಬುದೇ ಸಂಚಿನ ಉದ್ದೇಶ. ಅದಕ್ಕೆ ನಾವು ಆಸ್ಪದ ಕೊಡಬಾರದು. ಯುದ್ಧ ನಡೆಸುವ ಬಗ್ಗೆ ಸರ್ವಪಕ್ಷ ಸಭೆ, ಅಧಿಕಾರಿಗಳು, ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ. ಈ ವಿಚಾರದಲ್ಲಿ ಇಡೀ ದೇಶ ಒಗ್ಗಟ್ಟಾಗಿರಬೇಕು ಎಂದು ಹೇಳಿದ್ದಾರೆ.

Tags:    

Similar News