Suspended | ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕರ್ತವ್ಯ ಲೋಪ; ಐವರು ನೌಕರರ ಅಮಾನತು

ಬೆಂಗಳೂರಿನ ವಿವಿಧ ವಲಯಗಳಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆಯ ನೀರಸ ಪ್ರಗತಿಗೆ ಕಾರಣರಾದ ಐವರು ನೌಕರರನ್ನು ಕರ್ತವ್ಯಲೋಪದ ಆರೋಪದ ಮೇಲೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಮಾನತು ಮಾಡಿದೆ.;

Update: 2025-05-24 05:17 GMT

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಡೆಸುತ್ತಿರುವ ಉಪಜಾತಿಗಳ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸದೇ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಐವರು ನೌಕರರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಅಮಾನತು ಮಾಡಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆಯ ಪ್ರಗತಿ ನೀರಸವಾಗಿದ್ದು, ಆಯೋಗವು ಸಮೀಕ್ಷಾ ಅವಧಿ ವಿಸ್ತರಣೆ ಮಾಡಿದೆ. ನೀರಸ ಪ್ರಗತಿ ಕಾಣಲು ಗಣತಿಗೆ ನಿಯೋಜಿತರಾಗಿರುವ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪದ ಮೇಲೆ ಜಯನಗರದ ಹಿರಿಯ ಆರೋಗ್ಯ ಪರಿವೀಕ್ಷಕ ಶ್ರೀಜೇಶ್, ಮಹಾಲಕ್ಷ್ಮೀಪುರದ ಕಿರಿಯ ಆರೋಗ್ಯ ಪರಿವೀಕ್ಷಕ ವಿಜಯ್ ಕುಮಾರ್, ಅಂಜನಾಪುರದ ಕಂದಾಯ ವಸೂಲಿಗಾರ ಶಿವರಾಜ್ ಎಚ್.ಸಿ., ಡಿ-ಗ್ರೂಪ್‌ ಸಿಬ್ಬಂದಿ ಶಂಕರ್ ಹಾಗೂ  ಸಿ.ವಿ.ರಾಮನ್‌ನಗರದ ಕಂದಾಯ ವಸೂಲಿಗಾರ ಮಹದೇವ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ. 

ಮನೆ-ಮನೆಗೆ ಭೇಟಿಯ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಗಣತಿದಾರರು ಪ್ರತಿದಿನ ಮೊಬೈಲ್‌ ಆ್ಯಪ್‌ನಲ್ಲಿ ಲಾಗಿನ್ ಆಗಬೇಕು. ತಮಗೆ ನಿಗದಿಪಡಿಸಿರುವ ಸಮೀಕ್ಷಾ ಬ್ಲಾಕ್‌ನಲ್ಲಿರುವ ಎಲ್ಲ ಮನೆಗಳಿಗೂ ತಪ್ಪದೇ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಆದರೆ, ಈ ಐವರು ಸಿಬ್ಬಂದಿ ಸರಿಯಾದ ಸಮಯದಲ್ಲಿ ಸಮೀಕ್ಷೆ ನಡೆಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ನೌಕರರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Similar News