ಸೌಜನ್ಯ ಪರ ಹೋರಾಟಗಾರರ ವಿರುದ್ಧ ಬಲವಂತದ ಕ್ರಮ ಬೇಡ; ನ.12 ರವರೆಗೆ ಎಫ್‌ಐಆರ್‌ ವಿಚಾರಣೆಗೆ ಹೈಕೋರ್ಟ್‌ ತಡೆ

ಅರ್ಜಿದಾರರಿಗೆ ಎಸ್ಐಟಿ ಅಧಿಕಾರಿಗಳು ಈಗಾಗಲೇ 9 ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಸುಮಾರು 100 ಗಂಟೆಗಳ ವಿಚಾರಣೆ ನಡೆಸಿದರೂ ದುರುದ್ದೇಶಪೂರಿತವಾಗಿ ಮತ್ತೆ ನೋಟಿಸ್ ನೀಡಲಾಗುತ್ತಿದೆ ಎಂದು ವಕೀಲ ಬಾಲನ್‌ ಆರೋಪಿಸಿದರು.

Update: 2025-10-30 15:12 GMT

ಹೈಕೋರ್ಟ್‌ ಹಾಗೂ ಸೌಜನ್ಯಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಪ್ರಕರಣದಲ್ಲಿ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್ ಮತ್ತು ವಿಠಲ್ ಗೌಡ ವಿರುದ್ಧ ದಾಖಲಾಗಿದ್ದ ಎಫ್ಐಆರ್ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

ಧರ್ಮಸ್ಥಳದ ಠಾಣೆಯ ಎಫ್ಐಆರ್ ಸಂಖ್ಯೆ 39/2025 ರದ್ದು ಕೋರಿ ಈ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ನೇತೃತ್ವದ ಏಕ ಸದಸ್ಯ ಪೀಠವು ವಾದ- ಪ್ರತಿವಾದ ಆಲಿಸಿ ಪ್ರಕರಣದ ತನಿಖೆಗೆ ನ.12ರವರೆಗೆ ತಡೆಯಾಜ್ಞೆ ನೀಡಿತು. ಈ ಅವಧಿಯಲ್ಲಿ ನಾಲ್ವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆಯೂ ನ್ಯಾಯಪೀಠ ಸೂಚಿಸಿದೆ.

ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದ್ದು, ಅರ್ಜಿದಾರರು ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಹೀಗಿರುವಾಗ ಪದೇ ಪದೇ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುತ್ತಿದೆ. ಹಾಗಾಗಿ ಇವರ ಮೇಲಿನ ಎಫ್ಐಆರ್ ರದ್ದು ಮಾಡಬೇಕು ಎಂದು ಅರ್ಜಿದಾರರ ಪರ ವಕೀಲ ಎಸ್. ಬಾಲನ್ ವಾದ ಮಂಡಿಸಿದರು.

ಅರ್ಜಿದಾರರಿಗೆ ಎಸ್ಐಟಿ ಅಧಿಕಾರಿಗಳು ಈಗಾಗಲೇ 9 ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಸುಮಾರು 100 ಗಂಟೆಗಳ ವಿಚಾರಣೆ ನಡೆಸಿದರೂ ದುರುದ್ದೇಶಪೂರಿತವಾಗಿ ಮತ್ತೆ ನೋಟಿಸ್ ನೀಡಲಾಗುತ್ತಿದೆ. ಪ್ರಕರಣದಲ್ಲಿ ಸಂಗ್ರಹಿಸಿರುವ 164 ಹೇಳಿಕೆಗಳಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪ ಕಂಡುಬಂದಿಲ್ಲ. ಆದರೂ, ಅ.24ರಂದು ವಿಚಾರಣೆಗೆ ಬರುವಂತೆ ಎಸ್‌ಐಟಿ ತಂಡ ಮತ್ತೆ ನೋಟಿಸ್ ನೀಡಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಆರಂಭದಲ್ಲಿ 211(a) ಅಡಿ ಎಫ್ಐಆರ್ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ ಎಂದು ಬಾಲನ್ ಅವರು ಕೋರ್ಟ್ ಗಮನ ಸೆಳೆದರು.

ಎಸ್ಐಟಿ ಪರ ವಾದ ಮಂಡಿಸಿದ ವಕೀಲ ಬಿ.ಎನ್. ಜಗದೀಶ್ ಅವರು, ಅರ್ಜಿದಾರರ ಪ್ರಚೋದನೆಯಿಂದಲೇ ಚಿನ್ನಯ್ಯ ದೂರು ನೀಡಿದ್ದಾನೆ. ಹಾಗಾಗಿ ಇವರನ್ನು ಆರೋಪಿಗಳನ್ನಾಗಿಸಿ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

Tags:    

Similar News