ಪರಿಶಿಷ್ಠರ ನಿಧಿ ಬಳಕೆ: ಸಂಪುಟಸಭೆಯಲ್ಲಿ ಸಿಎಂ ಆಪ್ತರಿಬ್ಬರ ವಾಗ್ವಾದ; ಜಾರ್ಜ್ ವಿರುದ್ಧ ಮಹಾದೇವಪ್ಪ ಆಕ್ರೋಶ
ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ನಾನು ಎದ್ದು ಹೊರಟೇ ಬಿಡುತ್ತೇನೆ ಎಂದು ಕೂಗಾಡಿದ್ದು, ಏನು ಅಂದುಕೊಂಡಿದ್ದೀರಿ, ಎಸ್‌ಸಿಪಿ, ಎಸ್‌ಟಿಪಿ ಹಣ ನೀಡದೆ ಇರುವುದು ಏಕೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಏರು ದನಿಯಲ್ಲಿ ಪ್ರಶ್ನಿಸಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್, ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಊಹಾಪೋಹಗಳ ನಡುವೆಯೇ ಸರ್ಕಾರದ ಇಬ್ಬರು ಹಿರಿಯ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸಚಿವರನ್ನು ಸಮಾಧಾನ ಮಾಡಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವ ಹಾಗೂ ಸಿಎಂ ಆಪ್ತ ಎಚ್.ಸಿ. ಮಹದೇವಪ್ಪ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯೋಜನೆಗಳಿಗೆ (ಎಸ್.ಸಿ.ಎಸ್.ಪಿ / ಟಿ.ಎಸ್.ಪಿಹಣ ಬಿಡುಗಡೆ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಬಳಿ ಪ್ರಸ್ತಾಪಿಸಿ, ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ನಾನು ಎದ್ದು ಹೊರಟೇ ಬಿಡುತ್ತೇನೆ," ಎಂದು ಕೂಗಾಡಿದ್ದು, "ಏನು ಅಂದುಕೊಂಡಿದ್ದೀರಿ, ಎಸ್‌ಸಿಪಿ, ಎಸ್‌ಟಿಪಿ ಹಣ ನೀಡದೆ ಇರುವುದು ಏಕೆ?" ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದಾರೆ. ಕೊನೆಗೆ ಸಚಿವ ಮಹದೇವಪ್ಪ ಅವರನ್ನು ಸಿಎಂ ಸಿದ್ದರಾಮಯ್ಯ ಸಮಾಧಾನ ಮಾಡಿದ್ದಾರೆ.
ಸಚಿವ ಸಂಪುಟದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಕಾನೂನೂ ಸಚಿವ ಎಚ್.ಕೆ. ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಎಲ್ಲಾ ವಿಷಯಗಳನ್ನು ಸಚಿವರು ಆತ್ಮೀಯವಾಗಿ ಚರ್ಚೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಗಂಗಾ ಕಲ್ಯಾಣ ಫಲಾನುಭವಿಗಳ ಆಯ್ಕೆ ಸಚಿವರ ಹೆಗಲಿಗೆ
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಮತ್ತು ಪಂಪ್‌ಸೆಟ್‌ಗಳನ್ನು ಸರಬರಾಜು ಮಾಡಲು 2022-23ನೇ ಸಾಲಿನ ಗುತ್ತಿಗೆದಾರರ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ (2024-25 ಮತ್ತು 2025-26) ಸೀಮಿತಗೊಳಿಸಿ. 2027ನೇ ಜೂನ್ ತಿಂಗಳವರೆಗೆ ವಿಸ್ತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ಗಂಗಾಕಲ್ಯಾಣ ಯೋಜನೆ ಮತ್ತು ಇತರ ಸ್ವಯಂ ಉದ್ಯೋಗ ಯೋಜನೆಗಳಡಿ ಫಲಾನುಭವಿಗಳನ್ನು ಆಯಾ ವರ್ಷದ ಅ. 31ರೊಳಗೆ ತಾರೀಖಿನೊಳಗೆ ಸಂಬಂಧಪಟ್ಟ ಆಯಾ ಕ್ಷೇತ್ರದ ಮಾನ್ಯ ಶಾಸಕರುಗಳು ಆಯ್ಕೆ ಮಾಡದೇ ಇದ್ದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯಾ ಜಿಲ್ಲಾ ಮಾನ್ಯ ಉಸ್ತುವಾರಿ ಸಚಿವರಿಗೆ ವಹಿಸಲು ಸಚಿವ ಸಂಪುಟ ನಿರ್ಣಯಿಸಿದೆ.