ಪ್ರವಾಹ ಪರಿಹಾರ; ಕೇಂದ್ರದ ಮೊರೆ ಹೋಗಲು ಸಚಿವ ಸಂಪುಟ ತೀರ್ಮಾನ
ಮಳೆ ಪ್ರವಾಹದಿಂದ ಮೂಲಸೌಕರ್ಯ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಅಡಿ 1545.23 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ.
ನೈರುತ್ಯ ಮುಂಗಾರು ಅವಧಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಮತ್ತು ನದಿ ಪ್ರವಾಹದಿಂದ ಮೂಲಸೌಕರ್ಯಕ್ಕೆ ಹಾನಿಯಾಗಿದ್ದು, ಪರಿಹಾರ ಒದಗಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್) 1545.23 ಕೋಟಿ ರೂ. ಆರ್ಥಿಕ ನೆರವು ಕೋರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರವಾಹದಿಂದ ರಸ್ತೆ, ಸೇತುವೆ, ಶಾಲೆ ಕಟ್ಟಡಗಳು ಸೇರಿ ಮೂಲ ಸೌಕರ್ಯಗಳು ಹಾನಿಯಾಗಿವೆ. ಇವುಗಳ ಪುನರ್ ನಿರ್ಮಾಣಕ್ಕಾಗಿ ಆರ್ಥಿಕ ನೆರವು ಅಗತ್ಯವಾಗಿದೆ. ಆದ್ದರಿಂದ ಎನ್‌ಡಿಆರ್‌ಎಫ್ ಅಡಿ ಸೂಕ್ತ ನೆರವು ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಜತೆಗೆ ಇದೇ ಮೊದಲ ಬಾರಿಗೆ ಮೂಲಸೌಕರ್ಯ ಹಾನಿಗೂ ಪರಿಹಾರ ಕೋರಲು ಸಂಪುಟ ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಮುಂಗಾರು ಅವಧಿಯಲ್ಲಿ ಭಾರೀ ಮಳೆ ಮತ್ತು ನದಿ ಪ್ರವಾಹದಿಂದಾದ ಹಾನಿಯ ಕುರಿತು ಐದು ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗಿದೆ. ಹಾನಿಯಾದ ಮೌಲ್ಯದ ಕುರಿತ ವಿವರಗಳೊಂದಿಗೆ 1545.23 ಕೋಟಿ ರೂ. ಆರ್ಥಿಕ ನೆರವು ಕೋರಲು ತೀರ್ಮಾನಿಸಲಾಗಿದೆ. ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹಲವು ರಸ್ತೆ ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಗ್ರಾಮೀಣ ಸಂಪರ್ಕ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರದಿಂದ ಶೀಘ್ರ ಸಹಾಯ ನಿರೀಕ್ಷಿಸಿದೆ ಎಂದು ಹೇಳಿದರು.
ನಾಲ್ಕು ಬಂದರುಗಳ ಅಭಿವೃದ್ಧಿಗೆ ಕ್ರಮ
ರಾಜ್ಯದ ಕರಾವಳಿಯಲ್ಲಿರುವ ನಾಲ್ಕು ಬಂದರುಗಳಾದ ಕಾರವಾರ, ಹಳೆ ಮಂಗಳೂರು (ಬೇಂಗೆ ಬದಿ), ಹಳೆ ಮಂಗಳೂರು (ನಗರ ಬದಿಯ) ಮತ್ತು ಮಲ್ಪೆಯ ಬಂದರುಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, 40.12 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಬಂದರುಗಳ ಮೂಲಸೌಕರ್ಯ ಸುಧಾರಣೆ, ನೌಕಾಸಂಗ್ರಹಣಾ ಸೌಲಭ್ಯ, ಮೀನುಗಾರಿಕಾ ಉಪಕರಣಗಳ ನಿಲ್ದಾಣ, ತಂಗುದಾಣ ಹಾಗೂ ಸರಕು ಸಾಗಾಣಿಕೆ ಸೌಲಭ್ಯಗಳನ್ನು ಉನ್ನತ ಮಟ್ಟಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ಈ ಕ್ರಮದಿಂದ ಬಂದರುಗಳಲ್ಲಿ ಸೌಲಭ್ಯಗಳು ಆಧುನೀಕರಣಗೊಳ್ಳಲಿವೆ. ಮೀನುಗಾರರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಸೌಕರ್ಯ ದೊರೆಯಲಿದೆ ಎಂದು ತಿಳಿಸಿದರು.
ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಸರ್ಕಾರದ ಆರ್ಥಿಕ ಹೊರೆ ಕಡಿಮೆಯಾಗುವುದರ ಜತೆಗೆ ಖಾಸಗಿ ಹೂಡಿಕೆ ಆಕರ್ಷಿಸಲು ಅವಕಾಶ ಸಿಗಲಿದೆ. ಇದರ ಮೂಲಕ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯಿದೆ. ಕಾರವಾರ ಮತ್ತು ಮಲ್ಪೆ ಬಂದರುಗಳು ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರಗಳಾಗಿರುವುದರಿಂದ, ಈ ಯೋಜನೆಯು ಕರಾವಳಿ ಆರ್ಥಿಕತೆಯ ಬಲವರ್ಧನೆಗೆ ಸಹಕಾರಿ ಆಗಲಿದೆ.
ಅಲ್ಲದೇ, ಭೌಗೋಳಿಕ ಅನುಕೂಲತೆಯ ಹೊರತಾಗಿಯೂ ಸರಕು ಸಾಗಣೆ ಮತ್ತು ಬಂದರು ಆಧಾರಿತ ಅಭಿವೃದ್ಧಿಯಲ್ಲಿ ರಾಜ್ಯದ ಕಡಲ ಸಾಮರ್ಥ್ಯವನ್ನು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ ಮತ್ತು ಗೋವಾ ಬಳಸಿಕೊಳ್ಳುತ್ತಿವೆ. ಪಿಪಿಪಿ ಮಾದರಿಯ ಅಭಿವೃದ್ಧಿಯು ಸುಸ್ಥಿರ ಕಡಲ ಮತ್ತು ವ್ಯಾಪಾರ ಅಭ್ಯಾಸ ಖಾತ್ರಿಪಡಿಸುವ ಮೂಲಕ ರಾಜ್ಯದ ಕಡಲ ಸಾಮರ್ಥ್ಯ ಬಳಸಿಕೊಳ್ಳಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಭರವಸೆಯ ಮಾರ್ಗವಾಗಿದೆ ಎಂದು ತಿಳಿಸಿದರು.
2200 ಶಾಲಾ ಕೊಠಡಿಗಳ ನಿರ್ಮಾಣ
ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ 2200 ಶಾಲಾ ಕೊಠಡಿಗಳನ್ನು 360 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಯೋಜನಾ ರಸ್ತೆ ಆಸ್ತಿ ನಿರ್ವಹಣಾ ಕೇಂದ್ರಕ್ಕೆ ವಹಿಸಿ, ಕೇಂದ್ರೀಕೃತ ಟೆಂಡರ್ ಕರೆಯಲು ಅವಕಾಶ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಉಪ ನಿರ್ದೇಶಕರು (ಆಡಳಿತ) ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.
2025-26ನೇ ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣವನ್ನು ಅನುಷ್ಠಾನಗೊಳಿಸಲು ಕಳೆದ ದಶಕದಲ್ಲಿ ಅಸ್ತಿತ್ವದಲ್ಲಿರುವಂತೆ ವಿಕೇಂದ್ರೀಕೃತ ಪ್ರಕ್ರಿಯೆಯನ್ನು ಅನುಸರಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಇವರು ಜಿಲ್ಲಾ ಮಟ್ಟದ ಟೆಂಡರ್ ಮೂಲಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಕೆ-ಶೋರ್ ಯೋಜನೆಗೆ 20.47 ಕೋಟಿ ರೂ. ಅನುಮೋದನೆ:
ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿ ಹಾಗೂ ಸಮುದ್ರತೀರ ರಕ್ಷಣೆಗೆ ಕೈಗೊಳ್ಳಲಾಗಿರುವ ‘ಕೆ-ಶೋರ್’ ಯೋಜನೆಯಡಿ ತಾಂತ್ರಿಕ ಮತ್ತು ನಿರ್ವಹಣಾ ಸೇವೆಗಳನ್ನು ಪಡೆಯಲು 20.47 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಯೋಜನಾ ರೂಪಣೆ, ಖರೀದಿ, ತಾಂತ್ರಿಕ ಮಾರ್ಗದರ್ಶನ, ಡಿಪಿಆರ್ ತಯಾರಿಕೆ, ಸಾಮರ್ಥ್ಯ ವೃದ್ಧಿ, ಮೇಲ್ವಿಚಾರಣೆ ಸೇರಿದಂತೆ ಸಮಗ್ರವಾಗಿ ಕಾರ್ಯರೂಪಗೊಳಿಸಲಾಗುತ್ತದೆ. ಪ್ರಮುಖ ತಂಡವು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಮಟ್ಟದ ಘಟಕಗಳೊಂದಿಗೆ ಉತ್ತಮ ಸಂಯೋಜನೆಗಾಗಿ ಮಂಗಳೂರು, ಉಡುಪಿ ಮತ್ತು ಕಾರವಾರದಲ್ಲಿ ಪ್ರಾದೇಶಿಕ ಕಚೇರಿಗಳನ್ನು ಪ್ರಸ್ತಾಪಿಸಲಾಗಿದೆ.
ಸಮುದ್ರ ತೀರದ ಕುಸಿತ ನಿಯಂತ್ರಣ, ರೇಖೆ ಬಲಪಡಿಸುವ ಗೋಡೆ ನಿರ್ಮಾಣ, ಜಲವಿಜ್ಞಾನ ಹಾಗೂ ಭೂ-ವೈಜ್ಞಾನಿಕ ಅಧ್ಯಯನ ಸೇರಿದಂತೆ ಹಲವು ಹಂತಗಳ ಕಾರ್ಯಾಚರಣೆಗಳು ನಡೆಯುತ್ತವೆ. ಕೆ-ಶೋರ್ ಯೋಜನೆಯು ರಾಜ್ಯದ ಕರಾವಳಿಯನ್ನು ಶಾಶ್ವತವಾಗಿ ರಕ್ಷಿಸುವ ಉದ್ದೇಶದಿಂದ ರೂಪಿತವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಸರ್ಕಾರದ ಪ್ರಕಟಣೆ ಪ್ರಕಾರ, ಅನುಮೋದನೆಯೊಂದಿಗೆ ಸಂಬಂಧಿತ ಇಲಾಖೆಗಳಿಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೋಂದಣಿ ಇಲಾಖೆಯಲ್ಲಿ ಕಾವೇರಿ ಐಟಿ ಸೆಲ್
ರಾಜ್ಯ ಸರ್ಕಾರವು ‘ಕಾವೇರಿ ಐಟಿ ಸೆಲ್’ ಹೆಸರಿನ ಇನ್–ಹೌಸ್ ತಾಂತ್ರಿಕ ಅಭಿವೃದ್ಧಿ ವಿಭಾಗವನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯು 69.13 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 5 ವರ್ಷದ ಅವಧಿಗೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆಯ ವ್ಯವಸ್ಥೆಯಲ್ಲಿ ಜಾರಿಗೊಳ್ಳಲಿದೆ. ಈ ವಿಭಾಗವನ್ನು ರಾಜ್ಯದ ಐಟಿ ಮೂಲಸೌಕರ್ಯ, ಆನ್‌ಲೈನ್ ಸೇವೆಗಳ ಏಕೀಕರಣ, ಹಾಗೂ ವಿವಿಧ ಇಲಾಖೆಗಳ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಕೇಂದ್ರಿತವಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆ. ಕಾವೇರಿ ಐಟಿ ಸೆಲ್ ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆ ಬಲಪಡಿಸಲು ಮತ್ತು ಸಾರ್ವಜನಿಕ ಸೇವೆಗಳ ವೇಗ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ಹೆಚ್ಚಿಸಲು ನೆರವಾಗಲಿದೆ. ತಾಂತ್ರಿಕ ತಜ್ಞರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಡೇಟಾ ವಿಶ್ಲೇಷಕರು ಹಾಗೂ ಸೈಬರ್ ಭದ್ರತಾ ತಜ್ಞರನ್ನು ನಿಯೋಜಿಸಲಾಗುವುದು. ರಾಜ್ಯದ ಡಿಜಿಟಲ್ ಪರಿವರ್ತನೆಗೆ ವೇಗ ನೀಡುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮವು ‘ಕಾವೇರಿ’ ಯೋಜನೆಯಂತೆಯೇ ಸಾರ್ವಜನಿಕ ಸೇವೆಗಳ ಸುಗಮ ವಿತರಣೆಗೆ ಪೂರಕವಾಗಲಿದೆ ಎಂದರು.
ಗ್ರೇಟರ್ ಬೆಂಗಳೂರು ಕ್ರಿಯಾ ಯೋಜನೆಗೆ ಅನುಮೋದನೆ
ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 05 ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು 1055 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿನ 05 ನಗರ ಪಾಲಿಕೆಗಳಲ್ಲಿ, ವಿವಿಧ ವಾರ್ಡ್ ರಸ್ತೆಗಳ, ಚರಂಡಿ ಅಭಿವೃದ್ಧಿ, ನಿರ್ವಹಣಾ ಮತ್ತು ಮೂಲಸೌಕರ್ಯಗಳ ಕಾಮಗಾರಿಗಳನ್ನು ಒಟ್ಟು 900 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಕ್ರಿಯಾಯೋಜನೆ ಅಡಿಯಲ್ಲಿ, ಯಲಹಂಕ, ಮಹಾದೇವಪುರ, ರಾಜರಾಜೇಶ್ವರಿ ನಗರ, ಕೆ.ಆರ್.ಪುರಂ ಹಾಗೂ ದಾಸರಹಳ್ಳಿ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಸಾರ್ವಜನಿಕ ಬೆಳಕು, ತ್ಯಾಜ್ಯ ನಿರ್ವಹಣೆ ಮತ್ತು ನಾಗರಿಕ ಸೌಲಭ್ಯಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯ ಇತರೆ ತೀರ್ಮಾನಗಳು
- ಮಂಡ್ಯ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡದ ನಿರ್ಮಾಣ ಉದ್ದೇಶಕ್ಕೆ 1457.8 ಚ.ಮೀ ವಿಸ್ತೀರ್ಣದ ನಿವೇಶನ ಮಂಜೂರಾತಿಗೆ ಒಪ್ಪಿಗೆ
- ಯಾದಗಿರಿ ಜಿಲ್ಲೆ ಶಹಾಪುರ ನಗರಸಭೆ ವ್ಯಾಪ್ತಿಯ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕನಕ ಭವನ ನಿರ್ಮಾಣಕ್ಕೆ ಜಾಗ ಮಂಜೂರು
- ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್‌ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೂಲಸೌಕರ್ಯ ಅಭಿವೃದ್ಧಿ, ದುರಸ್ಥಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲು 23.25 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ
- ಕಾರವಾರ ವೈದ್ಯಕೀಯ ಕಾಲೇಜು ಅವರಣದಲ್ಲಿ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ 31.63 ಕೋಟಿ ರೂ. ಮೊತ್ತದಲ್ಲಿ ಅಗತ್ಯವಿರುವ ಉಪಕರಣಗಳ ಖರೀದಿ ಮತ್ತು ನಿರ್ಮಾಣ ಕಾಮಗಾರಿಗೆ ಒಪ್ಪಿಗೆ
- ಕರ್ನಾಟಕ ಸ್ಟಾರ್ಟ್ ಅಪ್ ಪಾಲಿಸಿ 2022-27ರ ಅಡಿಯಲ್ಲಿ ಐದು ವರ್ಷಗಳ ಅವಧಿಗೆ 80 ಕೋಟಿ ರೂ.ಗಳ ಹಂಚಿಕೆಯೊಂದಿಗೆ (ಪ್ರತಿ ಟಿಬಿಐಗೆ 10 ಕೋಟಿ ರೂ.) ಎಂಟು ಟೆಕ್ನಾಲಜಿ ಬ್ಯುಸಿನೆಸ್ ಇನ್ ಬೇಟರ್ಸ್ ಗಳನ್ನು ಸ್ಥಾಪಿಸಲು ಒಪ್ಪಿಗೆ
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಮತ್ತು ಭಾರತೀಯ ಮೀಸಲು ಪಡೆಯ (ಐಆರ್‌ಬಿ) ನೇಮಕಾತಿಗೆ ಅನುಮೋದನೆ
- 2025-26ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ 241 ವಿವಿಧ ಮಾದರಿಯ ವಾಹನಗಳನ್ನು 34.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ