3 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಶತಾಯುಷಿ ಸೂಲಗಿತ್ತಿ ಈರಮ್ಮಗೆ ರಾಜ್ಯೋತ್ಸವ ಪ್ರಶಸ್ತಿ ಮುಕುಟ
ಶತಾಯುಷಿ ಸೂಲಗಿತ್ತಿ ಈರಮ್ಮ ಅವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಶತಮಾನದ ಸಾರ್ಥಕ ಬದುಕು ಸವೆಸಿರುವ ಈರಮ್ಮ ಅವರ ಸೇವೆಯನ್ನು ಸರ್ಕಾರ ಗುರುತಿಸಿದೆ.
ಮಾನವೀಯ ಸೇವೆಯ ಮೂಲಕ ಸಾವಿರಾರು ಜನರ ಬಾಳಿನಲ್ಲಿ ಬೆಳಕಾದ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ ಶತಾಯುಷಿ ಸೂಲಗಿತ್ತಿ ಈರಮ್ಮ ಅವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಶತಮಾನದ ಸಾರ್ಥಕ ಬದುಕು ಸವೆಸಿರುವ ಈರಮ್ಮ ಅವರ ಸೇವೆಯನ್ನು ಸರ್ಕಾರ ಗುರುತಿಸಿದೆ.
3000ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿ
ಕೂಡ್ಲಿಗಿ ತಾಲೂಕಿನ ಹೆಮ್ಮೆಯ ಐತಿಹಾಸಿಕ ಪಾಳೆಗಾರರ ತವರು ಎನಿಸಿದ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿ ಗ್ರಾಮದ ಈರಮ್ಮ ಅವರು ಅರ್ಧ ಶತಮಾನದ ಸುದೀರ್ಘ ಸೇವೆಯಲ್ಲಿ 14000ಕ್ಕೂ ಹೆಚ್ಚು ಸಹಜ ಹಾಗೂ ಸುರಕ್ಷಿತ ಹೆರಿಗೆ ಮಾಡಿಸಿ, ಮಗು ಮತ್ತು ತಾಯಿಯ ಜೀವ ಉಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನಿಭಾಯಿಸುವಲ್ಲಿ ಈರಮ್ಮ ಅವರ ಪಾತ್ರ ಅನನ್ಯವಾದುದು. ಯಾವುದೇ ಜಾತಿ-ಧರ್ಮ, ಬಡವ, ಬಲ್ಲಿದ ಎಂಬ ಭೇದ ಭಾವ ಮಾಡದೇ, ಯಾರು ಕರೆದರೂ ಕ್ಷಣಾರ್ಧದಲ್ಲಿ ಹೋಗಿ ತಾಯಿ ಮತ್ತು ಮಗುವಿನ ಜೀವ ಉಳಿಸುವ ಮಹತ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಕಣ್ಣಿನ ಬೇನೆ ಗುಣಪಡಿಸಿದ ಮಾಂತ್ರಿಕ ಸ್ಪರ್ಶ
ಹೆರಿಗೆಯಷ್ಟೇ ಅಲ್ಲದೇ ಈರಮ್ಮನವರಿಗೆ ಇನ್ನೊಂದು ವಿಶೇಷ ಸಾಮರ್ಥ್ಯವಿದೆ. ಕಣ್ಣಿನಲ್ಲಿ ಬಿದ್ದ ಸಣ್ಣ ಹರಳನ್ನೂ ಕೂಡ ಹುಡುಕಿ ತೆಗೆದು, ಸಾವಿರಾರು ಜನರ ಕಣ್ಣಿನ ಬೇನೆಯನ್ನು ಗುಣಪಡಿಸಿದ್ದಾರೆ. ಅಕ್ಷರಶಃ ಗ್ರಾಮೀಣ ಜನರ ಪಾಲಿಗೆ ನಡೆದಾಡುವ ಆಸ್ಪತ್ರೆಯಂತಿದ್ದ ಈರಮ್ಮನವರ ಸಾರ್ಥಕ ಬದುಕನ್ನು ರಾಜ್ಯೋತ್ಸವ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತಿದೆ.
ಈರಮ್ಮನವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ಅವರಿಗೂ ವಯಸ್ಸಾಗಿದೆ. ಅವರು ಪ್ರಸ್ತುತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ.