ಸಿದ್ದರಾಮಯ್ಯ ಸಂಪುಟದ ಎಂಟು ಸಚಿವರ ಜತೆ ಸಭೆ ನಡೆಸದ ಸುರ್ಜೇವಾಲಾ

ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸುರ್ಜೇವಾಲಾ ಕಳೆದ ವಾರ ಅಸಮಾಧಾನಿತ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಈ ವೇಳೆ ಸಚಿವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.;

Update: 2025-07-16 15:24 GMT

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ

ರಾಜ್ಯ ಕಾಂಗ್ರೆಸ್‌ನೊಳಗೆ ಅಸಮಾಧಾನದ ಹೊಗೆಯಾಡಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ರಣದೀಪ್‌ ಸಿಂಗ್‌ ಕಳೆದ ಮೂರು ದಿನಗಳಿಂದ ಸಚಿವರ ಜತೆ ಪ್ರತ್ಯೇಕವಾಗಿ ಮುಖಾಮುಖಿ ಮಾತುಕತೆ ನಡೆಸಿದ ಸಭೆಯು ಮುಕ್ತಾಯಗೊಂಡಿದ್ದು, ಶಾಸಕರ ಮತ್ತು ಸಚಿವರ ನಡುವಿನ ಭಿನ್ನಾಭಿಪ್ರಾಯ ಶಮನದ ಪ್ರಯತ್ನ ನಡೆಸಿದ್ದಾರೆ. 

ಆಡಳಿತರೂಢ ಶಾಸಕರೇ ಬಹಿರಂಗವಾಗಿ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಇದು ರಾಜ್ಯರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಅಲ್ಲದೇ, ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತು. ಹೀಗಾಗಿ ಪಕ್ಷದ ಹೈಕಮಾಂಡ್‌ ಮಧ್ಯಪ್ರವೇಶಿಸಿ ಅಸಮಾಧಾನ ಶಮನಗೊಳಿಸುವ ಪ್ರಯತ್ನ ನಡೆಸಿತು. ರಾಜ್ಯ ಉಸ್ತುವಾರಿ ಸುರ್ಜೇವಾಲಾ ರಣದೀಪ್‌ ಸಿಂಗ್‌ ಅವರನ್ನು ಕಳುಹಿಸಿ ಶಾಸಕರೊಂದಿಗೆ ಮಾತುಕತೆ ನಡೆಸಿ ಬೇಸರಕ್ಕೆ ಕಾರಣಗಳೇನು ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿತು. 

ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸುರ್ಜೇವಾಲಾ ಕಳೆದ ವಾರ ಅಸಮಾಧಾನಿತ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಸಭೆಯಲ್ಲಿ ಸಚಿವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಕೆಲವು ಸಚಿವರು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಎಲ್ಲಾ ಶಾಸಕರ ಅಭಿಪ್ರಾಯಗಳನ್ನು ಪಡೆದ ಸುರ್ಜೇವಾಲಾ, ಸರ್ಕಾರ ಅಥವಾ ಸಚಿವರ ವಿರುದ್ಧ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಚನೆ ನೀಡಿದರು. ಅಲ್ಲದೇ, ಸಚಿವರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಅಶ್ವಾಸನೆ ನೀಡಿದ್ದರು. 

22 ಸಚಿವರ ಜತೆ ಸಮಾಲೋಚನೆ:  

ಶಾಸಕರ ದೂರು ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಕಾಲ ಸುರ್ಜೇವಾಲಾ ಪ್ರತ್ಯೇಕವಾಗಿ ಮುಖಾಮುಖಿ ಮಾತುಕತೆ ನಡೆಸಿದರು. ಈ ವೇಳೆ ಶಾಸಕರ ಅಸಮಾಧಾನಕ್ಕೆ ಕಾರಣಗಳೇನು? ಎಂಬುದರ ಕುರಿತು ಸಚಿವರೊಂದಿಗೆ ಚರ್ಚೆ ನಡೆಸಿದರು. 33 ಸಚಿವರ ಪೈಕಿ  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೊರತು ಪಡಿಸಿ ಆಯ್ದ ಸಚಿವರೊಂದಿಗೆ ಸರಣಿ ಸಭೆ ನಡೆಸಿದರು. 22 ಸಚಿವರ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಭೆ ನಡೆಸಿ ಶಾಸಕರ ಬೇಡಿಕೆಗಳನ್ನು ಈಡೇರಿಸುವತ್ತ ಗಮನ ನೀಡುವಂತೆ ಸೂಚಿಸಿದರು. ಉಳಿದ 8 ಸಚಿವರ ಬಗ್ಗೆ ಯಾವುದೇ ದೂರುಗಳ ಇಲ್ಲದ ಕಾರಣ ಅವರನ್ನು ಸಭೆಗೆ ಆಹ್ವಾನ ನೀಡಿಲ್ಲ ಎಂದು ಮೂಲಗಳು ಹೇಳಿವೆ. 

ಎಂಟು ಸಚಿವರ ಜತೆ ಸಭೆ ಇಲ್ಲ

ಎಂಟು ಸಚಿವರ ವಿರುದ್ಧ ದೂರುಗಳು ಇಲ್ಲದ ಕಾರಣ ಅವರೊಂದಿಗೆ ಸಭೆ ನಡೆಸಿಲ್ಲ. ಸಚಿವರಾದ ಕೆ.ಹೆಚ್ ಮುನಿಯಪ್ಪ, ಶರಣಬಸಪ್ಪ‌ ದರ್ಶನಾಪುರ್, ಆರ್.ಬಿ ತಿಮ್ಮಾಪುರ್, ಶಿವರಾಜ್ ತಂಗಡಗಿ, ಎಂ.ಸಿ ಸುಧಾಕರ್, ಕೆ.ಎನ್.ರಾಜಣ್ಣ, ಶಿವಾನಂದ‌ ಪಾಟೀಲ್ ಹಾಗೂ ಮಂಕಾಳ ವೈದ್ಯ ಅವರನ್ನು ಸಭೆಗೆ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ. 

ಸಚಿವರಾದ ಈಶ್ವರ್ ಖಂಡ್ರೆ, ಕೃಷ್ಣ ಭೈರೇಗೌಡ, ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಚೆಲುವ ನಾರಾಯಣಸ್ವಾಮಿ, ಹೆಚ್.ಕೆ ಪಾಟೀಲ್, ಜಿ.ಪರಮೇಶ್ವರ್ , ಕೆ.ಜೆ ಜಾರ್ಜ್ ಅವರೊಂದಿಗೆ ಸಭೆ ನಡೆಸಿ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಿದರು ಎಂದು ಹೇಳಲಾಗಿದೆ. 

ಸಚಿವರ ಮೌಲ್ಯಮಾಪನ 

ಸಚಿವರ ಸಭೆಯಲ್ಲಿ ಅವರ ಇಲಾಖೆಗಳ ಪ್ರಗತಿ ಬಗ್ಗೆ ಮಾಹಿತಿ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಮೌಲ್ಯಮಾಪನ ನಡೆಯಿತು ಎನ್ನುವ ಚರ್ಚೆಯಾಗಿದೆ. ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಗೆ ಸಮಗ್ರ ವರದಿಯನ್ನು ಸುರ್ಜೆವಾಲಾ ನೀಡಲಿದ್ದಾರೆ. ಸಚಿವ ಸಂಪುಟ ಪುನರ್ ರಚನೆಯಲ್ಲಿ ಈ ವರದಿ ಆಧಾರವಾಗಲಿದೆ ಎನ್ನಲಾಗಿದೆ

Tags:    

Similar News