ಪ್ರವೇಶ ನಿರ್ಬಂಧ ತೆರವು ಮಾಡಿದ ಸುಪ್ರೀಂ; 13 ವರ್ಷ ಬಳಿಕ ಗಣಿದಣಿ ರೆಡ್ಡಿಗೆ ಬಳ್ಳಾರಿ ಪ್ರವೇಶ

2011 ಸೆ.5 ರಂದು ಜನಾರ್ಧನ ರೆಡ್ಡಿ ಬಂಧನದೊಂದಿಗೆ ಬಳ್ಳಾರಿ, ಆಂಧ್ರಪ್ರದೇಶದ ಕರ್ನೂಲ್ ಹಾಗೂ ಅನಂತಪುರಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು.

Update: 2024-09-30 09:04 GMT

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ಬಳ್ಳಾರಿ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವು ಮಾಡಿದೆ.

2011 ಸೆ. 5 ರಂದು ಜನಾರ್ಧನ ರೆಡ್ಡಿ ಬಂಧನದೊಂದಿಗೆ ಬಳ್ಳಾರಿ, ಆಂಧ್ರಪ್ರದೇಶದ ಕರ್ನೂಲ್ ಹಾಗೂ ಅನಂತಪುರಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ನ್ಯಾಯಾಲಯದ ಪೂರ್ವಾನುಮತಿ ಮೇಲೆ ಒಂದು ಬಾರಿ ಪ್ರವೇಶ ಮಾಡಿದ್ದನ್ನು ಹೊರತುಪಡಿಸಿ 13 ವರ್ಷಗಳ ಕಾಲ ಜನಾರ್ಧನ ರೆಡ್ಡಿ ಅವರು ತಮ್ಮ ಕರ್ಮಭೂಮಿ ಬಳ್ಳಾರಿಯಿಂದ ದೂರ ಉಳಿದಿದ್ದರು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ 2015 ಜ.23 ರಂದು ಷರತ್ತುಬದ್ಧ ಜಾಮೀನು ನೀಡಿ, ಬಳ್ಳಾರಿ, ಅನಂತಪುರ ಹಾಗೂ ಕಡಪಗೆ ಹೋಗಬೇಕಾದರೆ ಅಗತ್ಯ ಪೂರ್ವಾನುಮತಿ ಪಡೆಯಬೇಕು ಎಂದು ಸೂಚಿಸಿತ್ತು.

ಸೋಮವಾರ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ನೇತೃತ್ವದ ದ್ವಿಸದಸ್ಯ ಪೀಠವು ಬಳ್ಳಾರಿ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಿ ಆದೇಶ ನೀಡಿದೆ. ಈಗಾಗಲೇ ರೆಡ್ಡಿ ಅವರು ಪೂರ್ವಾನುಮತಿ ಪಡೆದು ಬಳ್ಳಾರಿಗೆ ಹೋಗಿ ಬಂದಿದ್ದರು. ಆದರೆ, ಇನ್ನು ಮುಂದೆ ಅಂತಹ ಯಾವುದೇ ಅನುಮತಿ ಅಗತ್ಯಗವಿಲ್ಲ. ಬಳ್ಳಾರಿಯಿಂದಲೇ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ಕಳೆದ ಚುನಾವಣೆಯಲ್ಲಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಸ್ಥಾಪಿಸಿದ್ದ ಜನಾರ್ದನ ರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2024 ರ ಲೋಕಸಭೆ ಚುನಾವಣೆಗೂ ಮುನ್ನ ಮಾರ್ಚ್ 25ರಂದು ಅವರು ಮಾತೃಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಯಾವುದೇ ಷರತ್ತುಗಳಿಲ್ಲದೇ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನು ಬಿಜೆಪಿ ಜತೆ ವಿಲೀನಗೊಳಿಸಿದ್ದರು.

Tags:    

Similar News