ಸುಮಲತಾ ನಮ್ಮ ಅಮ್ಮ, ಅವರೊಂದಿಗೆ ಸದಾ ನಿಲ್ಲುತ್ತೇನೆ: ನಟ ದರ್ಶನ್
ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಸುಮಲತಾ ಅಂಬರೀಶ್ ಅವರು ಸ್ಪತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ದರ್ಶನ್ ಹಾಗೂ ಯಶ್ ಅವರು ಸುಮಲತಾ ಅವರ ಪರವಾಗಿ ಮತಯಾಚನೆ ಮಾಡಿದ್ದರು.;
ಕಳೆದ ಬಾರಿ ಮಂಡ್ಯ ಲೋಕಸಭೆ ಕ್ಷೇತ್ರ ತೀವ್ರ ಕುತೂಹಲದ ಕಣವಾಗಿತ್ತು. ಈ ಬಾರಿಯೂ ಮಂಡ್ಯ ಲೋಕಸಭೆ ಕ್ಷೇತ್ರ ಹಲವು ವಿಷಯಗಳಿಂದ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಮಂಡ್ಯ ಸಂಸದೆ ಸಮಲತಾ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದು, ಅವರ ಮುಂದಿನ ನಿರ್ಧಾರದ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ.
ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಸುಮಲತಾ ಅಂಬರೀಶ್ ಅವರು ಸ್ಪತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ನಟ ದರ್ಶನ್ ಹಾಗೂ ಯಶ್ ಅವರು ಮಂಡ್ಯದಲ್ಲಿ ಸುಮಲತಾ ಅವರ ಪರವಾಗಿ ಮತಯಾಚನೆ ಮಾಡಿದ್ದರು. ಅಷ್ಟೇ ಅಲ್ಲದೇ ಈ ನಟರು ಜೋಡೆತ್ತು ಎಂದೇ ಖ್ಯಾತಿ ಗಳಿಸಿದ್ದರು.
ಈ ಬಾರಿಯ ಮಂಡ್ಯ ಲೋಕಸಭೆ ಚುನಾವಣಾ ಕಣ ಬದಲಾಗಿದ್ದು, ಸಂಸದೆ ಸುಮಲತಾ ಅವರು ಬಿಜೆಪಿಯಿಂದ ಟಿಕೆಟ್ ನಿರೀಕ್ಷಿಸಿದ್ದರು. ಆದರೆ, ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಯಲ್ಲಿದ್ದು, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಂಸದೆ ಸುಮಲತಾ ಅವರ ಮುಂದಿನ ನಡೆಯ ಬಗ್ಗೆ ಏಪ್ರಿಲ್ 3ಕ್ಕೆ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದು, ಕುತೂಹಲ ಹೆಚ್ಚಾಗಿದೆ.
ಈ ಬೆಳವಣಿಗೆಗಳ ನಡುವೆ ನಟ ಯಶ್ ಹಾಗೂ ದರ್ಶನ್ ಅವರು ಸುಮಲತಾ ಅವರೊಂದಿಗೆ ನಿಲ್ಲಲಿದ್ದಾರೆಯೇ, ಒಂದೊಮ್ಮೆ ಸುಮಲತಾ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ, ಇಬ್ಬರು ಪ್ರಮುಖ ನಟರು ಸುಮಲತಾ ಅವರ ಪರ ಪ್ರಚಾರ ಮಾಡಲಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು.
ಇದೀಗ ಈ ವಿಚಾರವಾಗಿ ಮಾತನಾಡಿರುವ ಚಾಲೆಂಜಿಗ್ ಸ್ಟಾರ್ ದರ್ಶನ್ ತೂಗುದೀಪ ಅವರು, ʻʻಸುಮಲತಾ ಅವರು ನಮ್ಮ ಅಮ್ಮ, ಅವರೊಂದಿಗೆ ನಾನು ಯಾವಾಗಲೂ ಇರುತ್ತೇನೆʼʼ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ʻʻಸುಮಲತಾ ಅವರು ನಮ್ಮ ಅಮ್ಮ, ಅವರೊಂದಿಗೆ ನಾನು ನಿಲ್ಲುತ್ತೇನೆ. ಹೆತ್ತ ತಾಯಿಯನ್ನು ಬಿಟ್ಟು ಕೊಡೋಕೆ ಆಗುತ್ತಾ, ಮೊನ್ನೆಯವರೆಗೂ ಸುಮಲತಾ ಅಮ್ಮನೊಂದಿಗೆ ಇದ್ದೆ. ಈಗ ಅವರ ಕೈಬಿಟ್ಟರೆ ಆಗುತ್ತದೆಯೇ, ಬೇರೆಯವರಿಗಾಗಿ ಅಮ್ಮನನ್ನು ಬಿಡುವುದಕ್ಕೆ ಆಗುತ್ತಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.