ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಪ್ರತೀಕಾರದ ದಾಳಿ: ಉಡುಪಿ, ಮಂಗಳೂರಿನಲ್ಲಿ ಯುವಕರ ಕೊಲೆ ಯತ್ನ
ಉಡುಪಿಯಲ್ಲಿ ಮುಸ್ಲಿಂ ಆಟೋ ಚಾಲಕನ ಮೇಲೆ ಕೊಲೆ ಯತ್ನ ನಡೆದಿದ್ದರೆ, ಮಂಗಳೂರಿನ ಹೊರವಲಯದಲ್ಲಿ ಯುವಕನೊಬ್ಬನಿಗೆ ಚೂರಿ ಇರಿತವಾಗಿದೆ.;
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಗುರುವಾರ ರಾತ್ರಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ಶುಕ್ರವಾರ ಉಡುಪಿ ಮತ್ತು ಮಂಗಳೂರಿನಲ್ಲಿ ಮುಸ್ಲಿಂ ಯುವಕರ ಮೇಲೆ ಎರಡು ಪ್ರತ್ಯೇಕ ದಾಳಿಗಳು ನಡೆದಿವೆ. ಹೀಗಾಗಿ ಜಿಲ್ಲೆಯಲ್ಲಿ ಒತ್ತಡದ ವಾತಾವರಣ ಸೃಷ್ಟಿಯಾಗಿದೆ. ಉಡುಪಿಯಲ್ಲಿ ಮುಸ್ಲಿಂ ಆಟೋ ಚಾಲಕನ ಮೇಲೆ ಕೊಲೆ ಯತ್ನ ನಡೆದಿದ್ದರೆ, ಮಂಗಳೂರಿನ ಹೊರವಲಯದಲ್ಲಿ ಯುವಕನೊಬ್ಬನಿಗೆ ಚೂರಿ ಇರಿತವಾಗಿದೆ.
ಉಡುಪಿ ತಾಲೂಕಿನ ಅತ್ರಾಡಿಯಲ್ಲಿ ಶುಕ್ರವಾರ ಆಟೋ ಚಾಲಕ ಆರ್. ಪ್ರಾಯದಾರ್ ಎಂಬುವರ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆರೋಪಿಗಳಾದ ಸುಶಾಂತ್ ಮತ್ತು ಸಂದೇಶ್ ಪೂಜಾರಿ ಎಂಬವರು ಅಬೂಬಕ್ಕರ್‌ರ ಆಟೋವನ್ನು ಅಡ್ಡಗಟ್ಟಿ ಕೊಲೆಗೆ ಯತ್ನಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಹಿರಿಯಡ್ಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯವನ್ನು ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ
ಮಂಗಳೂರಿನಲ್ಲಿ ಚೂರಿ ಇರಿತ
ಮಂಗಳೂರಿನ ಹೊರವಲಯದ ಕಣ್ಣೂರಿನಲ್ಲಿ ಶುಕ್ರವಾರ ನಸುಕಿನಲ್ಲಿ ಯುವಕನೊಬ್ಬನಿಗೆ ಚೂರಿ ಇರಿತದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನನ್ನು ನೌಷಾದ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ನೌಷಾದ್ ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಆರೋಪಿಗಳು ಗುರುತು ಸಿಗದಿದ್ದರೂ, ಈ ಘಟನೆಯೂ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದ ಪ್ರತೀಕಾರದ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನೌಷಾದ್‌ನ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸುಹಾಸ್ ಶೆಟ್ಟಿ ಹತ್ಯೆಯಿಂದ ದ. ಕ ತಲ್ಲಣ
ಗುರುವಾರ ರಾತ್ರಿ ಮಂಗಳೂರಿನ ಬಜಪೆ ಕಿನ್ನಿಪದವಿನಲ್ಲಿ ಸುಹಾಸ್ ಶೆಟ್ಟಿ ಎಂಬ ರೌಡಿಶೀಟರ್ ಮತ್ತು ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿತ್ತು. ಸುಹಾಸ್ 2022ರಲ್ಲಿ ನಡೆದ ಫಾಸಿಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಆತ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ವಿಫ್ಟ್ ಕಾರು ಮತ್ತು ಗೂಡ್ಸ್ ವಾಹನದಲ್ಲಿ ಬಂದ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳು ಶುಕ್ರವಾರ ಬಂದ್‌ಗೆ ಕರೆ ನೀಡಿದ್ದವು.
ಪೊಲೀಸರ ಕ್ರಮ ಮತ್ತು ತನಿಖೆ
ಈ ಎರಡು ಘಟನೆಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಆರೋಪಿಗಳ ಹಿನ್ನೆಲೆ ಮತ್ತು ಈ ದಾಳಿಗಳ ಸಂಪರ್ಕವನ್ನು ಪರಿಶೀಲಿಸುತ್ತಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿರುವುದಾಗಿ ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಎದುರಿಸಿದ್ದಾರೆ.