ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಶಾಂತಿ ಕಾಪಾಡಲು ಮುಸ್ಲಿಮ್ ಮುಖಂಡರ ಮನವಿ

ಈ ಕೊಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕರೆ ನೀಡಿದ್ದ ಜಿಲ್ಲಾ ಬಂದ್‌ನಿಂದಾಗಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ಕೆಲವೆಡೆ ಬಸ್‌ಗಳಿಗೆ ಕಲ್ಲು ತೂರಾಟದ ಘಟನೆಗಳೂ ವರದಿಯಾಗಿವೆ.;

Update: 2025-05-02 08:14 GMT

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆಯ ಕಿನ್ನಿಪದವು ಕ್ರಾಸ್ ಬಳಿ ಮೇ 1ರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಿಂದ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯದ ಮುಖಂಡರು ಸಾರ್ವಜನಿಕರಿಗೆ, ವಿಶೇಷವಾಗಿ ತಮ್ಮ ಸಮುದಾಯದವರಿಗೆ, ಶಾಂತಿ ಮತ್ತು ಸಂಯಮ ಕಾಪಾಡುವಂತೆ ತುರ್ತು ಮನವಿ ಮಾಡಿದ್ದಾರೆ.

ಈ ಕೊಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕರೆ ನೀಡಿದ್ದ ಜಿಲ್ಲಾ ಬಂದ್‌ನಿಂದಾಗಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ಕೆಲವೆಡೆ ಬಸ್‌ಗಳಿಗೆ ಕಲ್ಲು ತೂರಾಟದ ಘಟನೆಗಳೂ ವರದಿಯಾಗಿವೆ.

ಮುಸ್ಲಿಮ್ ಮುಖಂಡರು ಈ ಸೂಕ್ಷ್ಮ ಸಂದರ್ಭದಲ್ಲಿ ಯಾವುದೇ ಪ್ರಚೋದನೆಗೆ ಒಳಗಾಗದಂತೆ ಮತ್ತು ಶಾಂತಿಯುತ ವಾತಾವರಣ ಕಾಪಾಡಲು ಸಹಕರಿಸುವಂತೆ ಕೋರಿದ್ದಾರೆ. ಶುಕ್ರವಾರ (ಮೇ 2) ಪ್ರಾರ್ಥನೆಯ ದಿನವಾದ್ದರಿಂದ, ಕೆಲವರು ಉದ್ದೇಶಪೂರ್ವಕವಾಗಿ ಮಸೀದಿಗಳ ಬಳಿ ಪ್ರಚೋದನಾತ್ಮಕ ಕೃತ್ಯಗಳಲ್ಲಿ ತೊಡಗಬಹುದು ಎಂಬ ಆತಂಕವಿದೆ. ಇಂತಹ ಸಂದರ್ಭಗಳಲ್ಲಿ ಸಂಯಮದಿಂದ ವರ್ತಿಸಿ, ಯಾವುದೇ ಆವೇಶಕ್ಕೊಳಗಾಗದಂತೆ ಮುಖಂಡರು ಸಲಹೆ ನೀಡಿದ್ದಾರೆ.

ಶುಕ್ರವಾರದ ಪ್ರಾರ್ಥನೆಯ ನಂತರ ಯಾರೂ ಮಸೀದಿಗಳ ಬಳಿ ಗುಂಪು ಸೇರದೆ, ಕೂಡಲೇ ಮನೆಗೆ ತಲುಪುವಂತೆ ನೋಡಿಕೊಳ್ಳಬೇಕು. ಶಾಂತಿಗೆ ಭಂಗ ತರುವ ಯಾವುದೇ ಘಟನೆ ಕಂಡುಬಂದಲ್ಲಿ, ತಕ್ಷಣ ಪೊಲೀಸ್ ಇಲಾಖೆಗೆ ಕರೆ ಮಾಡಿ (100 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ) ಮಾಹಿತಿ ನೀಡಬೇಕು. ಬಂದ್‌ನಿಂದಾಗಿ ಸಾರಿಗೆ ಸೌಲಭ್ಯವಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರಿಗೆ, ಸಾಧ್ಯವಾದರೆ ಸಹಾಯ ಮಾಡಬೇಕು. ಇದರಿಂದ ಸಾಮಾಜಿಕ ಸೌಹಾರ್ದತೆಯ ಸಂದೇಶವನ್ನು ಸಾರಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ದ್ವೇಷಪೂರಿತ ಸಂದೇಶಗಳು ಅಥವಾ ಸುಳ್ಳು ಸುದ್ದಿಗಳಿಗೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ.

Tags:    

Similar News