ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಎನ್‌ಐಎ ತನಿಖೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಇಬ್ಬರು ಹಿಂದೂ ಧರ್ಮಿಯರು ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು.;
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುವಂತೆ ಕೋರಿ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಮೇ 1 ರಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ಗುಂಪು ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಇಬ್ಬರು ಹಿಂದೂ ಧರ್ಮಿಯರು ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಹತ್ಯೆ ಪ್ರಕರಣದ ಹಿಂದೆ ಪಾಕಿಸ್ತಾನ ಸಂಪರ್ಕದ ಉಗ್ರ ಸಂಘಟನೆಗಳ ಕೈವಾಡವಿದ್ದು, ಈ ಕುರಿತು ಎನ್‌ಐಎ ತನಿಖೆ ನಡೆಸಬೇಕು. ರಾಜ್ಯ ಪೊಲೀಸ್ ತನಿಖೆಯ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.
ಮನವಿಯಲ್ಲಿ ಏನಿದೆ?
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಬೆಚ್ಚಿಬೀಳಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋಮು ಉದ್ವಿಗ್ನತೆ ಮತ್ತು ಅಶಾಂತಿಗೆ ಕಾರಣವಾಗಿದೆ. ಘಟನೆಯ ಗಂಭೀರತೆ ಅರಿಯದ ರಾಜ್ಯ ಸರ್ಕಾರ ಪ್ರಕರಣದ ತನಿಖೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಫಾಜಿಲ್ ಕುಟುಂಬಕ್ಕೆ ನೀಡಿದ 25 ಲಕ್ಷ ರೂ. ಪರಿಹಾರದಲ್ಲೇ ಸುಹಾಸ್ ಶೆಟ್ಟಿ ಹತ್ಯೆ ಕೊಲೆಗೆ ಸುಫಾರಿ ನೀಡಲಾಗಿದೆ. ಹಾಗಾಗಿ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಕೋರಲಾಗಿದೆ.
ಕೃತ್ಯದ ಹಿಂದೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಅದರ ಅಂಗಸಂಸ್ಥೆ ಎಸ್‌ಡಿಪಿಎ ಕೈವಾಡದ ಅನುಮಾನಗಳಿವೆ. ಆಂತರಿಕ ಭದ್ರತೆ ಅಸ್ಥಿರಗೊಳಿಸುವ ಮತ್ತು ರಾಷ್ಟ್ರೀಯ ಏಕತೆ ಹಾಳುಮಾಡುವ ಉದ್ದೇಶದಿಂದ ನಡೆದ ಕೃತ್ಯ ಇದಾಗಿದೆ. ಸುಹಾಸ್ ಶೆಟ್ಟಿಗೆ ಕೊಲೆ ಬೆದರಿಕೆ ಇದ್ದರೂ ಬಜ್ಪೆ ಪೊಲೀಸರು ಕ್ರಮ ಜರುಗಿಸಿರಲಿಲ್ಲ. ಬದಲಿಗೆ ಸಹಾಸ್‌ನನ್ನೇ ಠಾಣೆಗೆ ಕರೆಸಿ, ಕಿರುಕುಳ ನೀಡಿದ್ದರು. ಆತ್ಮರಕ್ಷಣೆಗೆ ಆಯುಧ ಇಟ್ಟುಕೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳು ಪೂರ್ವ ನಿಯೋಜಿತವಾಗಿದ್ದವು ಎಂದು ಮನವಿಯಲ್ಲಿ ಆರೋಪಿಸಲಾಗಿದೆ.