ಬೆಂಗಳೂರು ಸಿಂಧಿ ಕಾಲೇಜು ಘಟನೆ | ಸೆಕ್ಯೂರಿಟಿ ಗಾರ್ಡ್‌ಗೆ ಇರಿದು ಕೊಂದ ವಿದ್ಯಾರ್ಥಿ

Update: 2024-07-04 11:49 GMT

ಕಾಲೇಜು ಫೆಸ್ಟ್‌ ನೋಡಲು ಒಳಗಡೆ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಪದವಿ ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್‌ನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೈ ಕಿಶೋರ್‌ ರಾಯ್‌ (52) ಕೊಲೆಯಾದ ಸೆಕ್ಯೂರಿಟಿ ಗಾರ್ಡ್‌. ಆರೋಪಿ ವಿದ್ಯಾರ್ಥಿ ಭಾರ್ಗವ್‌ ಬರ್ಮನ್‌ (22). ಅಸ್ಸಾಂ ಮೂಲದ ಭಾರ್ಗವ್‌, ಸಿಂಧಿ ಕಾಲೇಜಿನಲ್ಲಿಅಂತಿಮ ವರ್ಷದ ಬಿಎ ವಿದ್ಯಾರ್ಥಿ. ಬಿಹಾರ ಮೂಲದ ಜೈ ಕಿಶೋರ್‌ ಕಳೆದ ಹತ್ತು ವರ್ಷಗಳಿಂದ ಅದೇ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದರು.

ಬುಧವಾರ ಸಿಂಧಿ ಕಾಲೇಜಿನಲ್ಲಿ ಎಥ್ನಿಕ್‌ ಡೇ ಕಲ್ಚರಲ್‌ ಫೆಸ್ಟ್‌ ನಡೆಯುತ್ತಿತ್ತು. ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರ್ಗವ್‌ ಕಾಲೇಜು ಒಳಗಡೆ ಹೋಗುತ್ತಿದ್ದ. ಈ ವೇಳೆ ಪ್ರವೇಶ ದ್ವಾರದಲ್ಲಿದ್ದ ಜೈ ಕಿಶೋರ್‌ ತಡೆದಿದ್ದ. ಈ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕಾಲೇಜಿನಿಂದ ವಾಪಸ್‌ ಬಂದ ಭಾರ್ಗವ್‌ ಸ್ವಲ್ಪ ಸಮಯದ ಬಳಿಕ ಪುನಃ ಕಾಲೇಜು ಗೇಟ್‌ ಬಳಿ ತೆರಳಿ ಜೈ ಕಿಶೋರ್‌ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಕೃತ್ಯ ಗಮನಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗಮಧ್ಯೆ ಜೈ ಕಿಶೋರ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಸ್ಟ್‌ನಲ್ಲಿ ಪಾಲ್ಗೊಂಡಿದ್ದ ಭಾರ್ಗವ್‌ ಹೊರಗಡೆ ಬಂದಿದ್ದು, ಪುನಃ ಒಳಗಡೆ ಹೋಗಲು ಯತ್ನಿಸಿದ್ದಾನೆ. ಮದ್ಯ ಸೇವನೆ ಶಂಕೆ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಜೈ ಕಿಶೋರ್‌ ತಡೆದಿದ್ದ ಎನ್ನಲಾಗುತ್ತಿದೆ. ಈ ಕುರಿತು ಇತರ ವಿದ್ಯಾರ್ಥಿಗಳು ಹಾಗೂ ಉಳಿದ ಸೆಕ್ಯೂರಿಟಿ ಗಾರ್ಡ್‌ಗಳಿಂದ ಮಾಹಿತಿ ಪಡೆಯಲಾಗುತ್ತಿದೆ.

ಘಟನೆ ಸಂಬಂಧ ಪ್ರತ್ಯಕ್ಷದರ್ಶಿ ಸೆಕ್ಯೂರಿಟಿ ಗಾರ್ಡ್‌ ರಾಜಶೇಖರ್‌ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ 103ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಭಾರ್ಗವ್‌ನನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Tags:    

Similar News