ಅರಣ್ಯ ಒತ್ತುವರಿ ನಿಷ್ಠುರವಾಗಿ ತಡೆಯಿರಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್ ಸೂಚನೆ

ಅರಣ್ಯ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.

Update: 2024-09-04 10:18 GMT
ಮುಖ್ಯಮಂತ್ರಿ ಸಿದ್ದರಾಮಯ್ಯ 46 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ 'ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ' ಪ್ರದಾನ ಮತ್ತು 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಿಸಿದರು.
Click the Play button to listen to article

ಅರಣ್ಯ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ(ಸೆ.4) ನಡೆದ ಕಾರ್ಯಕ್ರಮಮದಲ್ಲಿ 46 ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 'ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ' ಪ್ರದಾನ ಮತ್ತು 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

'ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ. ರಾಜ್ಯದಲ್ಲಿ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಅರಣ್ಯ ಸಂಪತ್ತು ಕಾಪಾಡುವ ವಿಚಾರದಲ್ಲಿ ಪದಕ ಪುರಸ್ಕೃತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.

'ಆನೆ ಮತ್ತು ಮಾನವ ಸಂಘರ್ಷದಿಂದ ಜೀವ, ಬೆಳೆ ಉಳಿಸಲು ರೈಲ್ವೆ ಬ್ಯಾರಿಕೇಡ್ ಪರಿಹಾರವಾಗಿದೆ. ಈವರೆಗೆ ಸುಮಾರು 333 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 101 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. 324 ಕಿ.ಮೀ. ತಡೆಗೋಡೆ ನಿರ್ಮಾಣಕ್ಕೆ ಎರಡು ವರ್ಷದಲ್ಲಿ ₹ 500 ಕೋಟಿ ಅನುದಾನ ನೀಡಬೇಕು' ಎಂದು ಮುಖ್ಯಮಂತ್ರಿ ಬಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು. ಒತ್ತುವರಿ ತೆರವಿನ ಬಗ್ಗೆ ವಿವರಿಸಿದ ಖಂಡ್ರೆ, 'ಕಳೆದ ಒಂದು ವರ್ಷದಲ್ಲಿ  ಸುಮಾರು 2,500 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಹೊಸದಾಗಿ 11,559 ಎಕರೆ ಭೂಮಿಯನ್ನು ಅಧಿಸೂಚಿತ ಅರಣ್ಯ ಅಥವಾ ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ' ಎಂದರು.

'ಇಲಾಖೆಯ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲಾಗಿದೆ. ಡಿಆರ್‌ಎಫ್‌ಒ ವರೆಗಿನ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲಾಗುತ್ತಿದೆ. ಬಹು ದಿನಗಳಿಂದ ಬಡ್ತಿ ಸಿಗದ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ. ರಾಜ್ಯದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು 5 ಕೋಟಿ ಗಿಡ ನೆಡುವ ಸಂಕಲ್ಪ ಮಾಡಲಾಗಿದ್ದು, ಗುರಿ ಮೀರಿದ ಸಾಧನೆಯೊಂದಿಗೆ 5.48 ಕೋಟಿ ಗಿಡ ನೆಟ್ಟು ಜಿಯೋ ಟ್ಯಾಗ್ ಮಾಡಲಾಗಿದೆ' ಎಂದರು.

'ಬೆಂಗಳೂರಿನಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ದೊಡ್ಡ ಉದ್ಯಾನಗಳನ್ನು ನಿರ್ಮಿಸಬೇಕಾಗಿದೆ. ಎಚ್‌ಎಂಟಿ ಬಳಿ ಇರುವ ಅರಣ್ಯ ಭೂಮಿಯನ್ನು ಮರಳಿ ಪಡೆದು ಅಲ್ಲಿ ಲಾಲ್ ಬಾಗ್ ಮಾದರಿಯಲ್ಲಿ ಉದ್ಯಾನ ನಿರ್ಮಿಸುವ ಯೋಜನೆಯಿದೆ' ಎಂದೂ ಅರಣ್ಯ ಸಚಿವರು ಹೇಳಿದರು.

Tags:    

Similar News