ಬಾಣಂತಿಯರ ಸಾವು ಪ್ರಕರಣ | ಪರಿಹಾರ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ

ಮೃತ ಬಾಣಂತಿಯರ ಕುಟುಂಬಗಳಿಗೆ ತಲಾ 9 ಲಕ್ಷ ಪರಿಹಾರ ನೀಡಲಾಗುವುದು. ಕಳಪೆ ಔಷಧ ಪೂರೈಸಿದ ಕಂಪನಿಗಳ ವಿರುದ್ಧ ನಿದ್ರಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Update: 2024-12-08 10:49 GMT

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ  ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಪ್ರತಿಪಕ್ಷಗಳ ಒತ್ತಾಯಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ.

ಮೃತ ಬಾಣಂತಿಯರ ಕುಟುಂಬಗಳಿಗೆ ಈ ಹಿಂದೆ ತಲಾ ಎರಡು ಲಕ್ಷ ಪರಿಹಾರ ಘೋಷಿಸಿತ್ತು. ಆದರೆ  ಈಗ ಮತ್ತೆ ತಲಾ 5 ಲಕ್ಷ ಪರಿಹಾರ ಘೋಷಿಸಿದೆ. ಸಂತ್ರಸ್ತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುವಂತೆ ಬಿಜೆಪಿ ಆಗ್ರಹಿಸಿತ್ತು. 

ಭಾನುವಾರ ಸಂಡೂರಿನಲ್ಲಿ ಆಯೋಜಿಸಿದ್ದ ಮತದಾರರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮೃತ ಬಾಣಂತಿಯರ ಕುಟುಂಬಗಳಿಗೆ ತಲಾ 5ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇದರ ಜೊತೆಗೆ 3 ಲಕ್ಷ ರೂ. ಸೇರಿ ತಲಾ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ದ್ರಾವಣ ಬಳಕೆಯಿಂದಾಗಿ ಐವರು ಬಾಣಂತಿಯರು ಮೃತಪಟ್ಟಿದ್ದರು.

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 9 ಮಂದಿ ಗರ್ಭಿಣಿಯರಿಗೆ ನ.9ರಂದು ಸಿಸೇರಿಯನ್​ ಮೂಲಕ ಹೆರಿಗೆ ಮಾಡಲಾಗಿತ್ತು.  ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ಹೆರಿಗೆ ಮಾಡಲಾಗಿತ್ತು. ಇವರ ಪೈಕಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದರು. ಉಳಿದ ನಾಲ್ವರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ಹೆರಿಗೆಯ ನಂತರ ಬಾಣಂತಿಯರಿಗೆ ಐವಿ ಹಾಗೂ ಆರ್‌ಎಲ್‌ ದ್ರಾವಣ ನೀಡಲಾಗಿತ್ತು.

ಐವಿ ದ್ರಾವಣ ನೀಡಿದ ಎರಡೇ ಗಂಟೆಗಳಲ್ಲಿ ಬಾಣಂತಿಯರು ಅಸ್ವಸ್ಥಗೊಂಡಿದ್ದರು. ಕೂಡಲೇ ಬಾಣಂತಿಯರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮ್ಸ್​ನಲ್ಲಿ ಪರೀಕ್ಷಿಸಿದಾಗ ಏಳು ಮಂದಿ ಬಾಣಂತಿಯರ ಪೈಕಿ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿತ್ತು. ಕಿಡ್ನಿ ವೈಫಲ್ಯ ಮತ್ತು ಇಲಿ ಜ್ವರದಿಂದ ಬಳಲುತ್ತಿದ್ದ ಸುಮಯಾ ನ.​ 12ರಿಂದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.೫ ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. 

ಔಷಧ ತಯಾರಿಸಿದ ಕಂಪನಿ ಮೇಲೆ ಕ್ರಮ​

ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಔಷಧ ತಯಾರಿಕಾ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಬಾಣಂತಿಯರು ಅಸ್ವಸ್ಥರಾಗಲು ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಐವಿ ದ್ರಾವಣದ ಸ್ಯಾಂಪಲ್‌ ಅನ್ನು ಕೇಂದ್ರ ಔಷಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಡಿ. 9ರಂದು ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಔಷಧ ಕಂಪನಿಗಳ ವಿರುದ್ಧ ನಿದ್ರಾಕ್ಷಿಣ್ಯ ಕ್ರಮ ಜರುಗಿಸುವುದು ನಿಶ್ಚಿತ ಎಂದು ಹೇಳಿದ್ದಾರೆ.

Tags:    

Similar News