Namma Metro Fare Hike | ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ: ಸಿಎಂ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ʼನಮ್ಮ ಮೆಟ್ರೋʼ ಪ್ರಯಾಣ ದರ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ್ದೇ ರಾಜ್ಯ ಸರ್ಕಾರ. 2023 ರಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರತಿಯೊಂದರ ಬೆಲೆ ಏರಿಕೆ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.;

Update: 2025-02-12 11:25 GMT
ಸಂಸದ ತೇಜಸ್ವಿ ಸೂರ್ಯ ಹಾಗೂ ಸಿಎಂ ಸಿದ್ದರಾಮಯ್ಯ

ʼನಮ್ಮ ಮೆಟ್ರೋʼ ಪ್ರಯಾಣ ದರ ಏರಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕೆಸರೆರಚಾಟ ಮುಂದುವರಿದಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ʼಎಕ್ಸ್ʼನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ʼನಮ್ಮ ಮೆಟ್ರೋʼ ಪ್ರಯಾಣ ದರ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ್ದೇ ರಾಜ್ಯ ಸರ್ಕಾರ. 2023 ರಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ದರ, ವಿದ್ಯುತ್ ಬಿಲ್, ಆಸ್ತಿ ತೆರಿಗೆ, ಅಬಕಾರಿ ಸುಂಕ ಹೀಗೆ ಪ್ರತಿಯೊಂದರ ಬೆಲೆ ಏರಿಕೆ ಮಾಡುತ್ತಿದೆʼ ಎಂದು ಆರೋಪಿಸಿದ್ದಾರೆ.

ʼಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ದರ ನಿಗದಿ ಸಮಿತಿ ರಚನೆ ಹಾಗೂ ಅದರ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಬಿಎಂಆರ್‌ಸಿಎಲ್‌ ಗೆ ರಾಜ್ಯ ಸರ್ಕಾರ ಸಲಹೆ ನೀಡಿತ್ತು. ದರ ನಿಗದಿ ಸಮಿತಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಕೂಡ ಇದ್ದರು. ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ಪರಿಷ್ಕೃತ ದರದ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆʼ ಎಂದು ತಿಳಿಸಿದ್ದಾರೆ.

ʼಪ್ರಯಾಣ ದರ ಏರಿಕೆಯಿಂದ ಬೆಂಗಳೂರಿನ ಜನ ಎದುರಿಸುತ್ತಿರುವ ತೊಂದರೆಗಳ ಅರಿವಿರುವ ಬಿಜೆಪಿಯು ಮೊದಲಿನಿಂದಲೂ ದರ ಏರಿಕೆ ವಿರೋಧಿಸುತ್ತಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮಗೆ ಜನರ ಸಮಸ್ಯೆ ಬಗ್ಗೆ ನಿಜವಾದ ಕಾಳಜಿ ಇದ್ದರೆ ಪರಿಷ್ಕೃತ ದರ ಏರಿಕೆ ಮರು ಪರಿಶೀಲಿಸಿ, ನ್ಯಾಯಸಮ್ಮತ ದರ ನಿಗದಿಪಡಿಸಬೇಕು. ದರ ಕಡಿಮೆ ಮಾಡಲು ನಿಮ್ಮನ್ನು ಯಾವ ಕಾನೂನು ಸಹ ಅಡ್ಡಿಪಡಿಸುವುದಿಲ್ಲʼ ಎಂದು ಟಾಂಗ್‌ ನೀಡಿದ್ದಾರೆ.

ʼಬೆಂಗಳೂರಿನ ಸಂಸದರು ಹಾಗೂ ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಬೆಂಗಳೂರಿನ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ತಮಗೆ ಸಲಹೆ ಮತ್ತು ಸಹಕಾರ ನೀಡಲು ಸಿದ್ದರಿದ್ದಾರೆ. ನೀವು ದರ ಪರಿಷ್ಕರಣೆಗೆ ಮುಂದಾಗಿʼ ಎಂದಿರುವ ಅವರು, ʼಬಿಎಂಆರ್‌ಸಿಎಲ್‌ನ ಅವೈಜ್ಞಾನಿ ದರ ಏರಿಕೆಯಿಂದ ಬಡವರು ಹಾಗೂ ಮಧ್ಯಮವರ್ಗದವರಿಗೆ ಸಂಕಷ್ಟ ಎದುರಾಗಿದೆ. ಕಡಿಮೆ ಅಂತರದ ಪ್ರಯಾಣಕ್ಕೂ ಶೇ 100ರಷ್ಟು ದರ ಏರಿಸಲಾಗಿದೆ. ಬೆಂಗಳೂರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆಯಾಗುವ ಬದಲು ದರ ಏರಿಕೆಯಿಂದಾಗಿ ಮೆಟ್ರೊ ದುಬಾರಿಯಾಗಿದೆʼ ಎಂದಿದ್ದಾರೆ. 

ಮಂಗಳವಾರವಷ್ಟೇ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋ ಪ್ರಯಾಣ ದರ ಏರಿಕೆ ಸಂಬಂಧ ಸ್ಪಷ್ಟನೆ ನೀಡಿದ್ದರು.

ʼನಮ್ಮ ಮೆಟ್ರೋʼ ದರ ಏರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಯೋಜನೆಯನ್ನು ಶೇ 50-50 ಆಧಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿವೆ. ಬಿಎಂಆರ್‌ಸಿಎಲ್‌ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಅಧಿಕಾರಿಗಳು ಇದ್ದಾರೆ. ಆದರೆ, ಕೇಂದ್ರ ಸರ್ಕಾರ ರೂಪಿಸಿರುವ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರಡಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸ ಕಾಟಿಕಿತ್ತಲ ಅವರು ನಿಗಮದ ಅಧ್ಯಕ್ಷರಾಗಿದ್ದು, ದರ ಏರಿಕೆ ವಿಚಾರದಲ್ಲಿ ನಿಗಮದ ತೀರ್ಮಾನವೇ ಅಂತಿಮವಾಗಿರುತ್ತದೆ. ಹಾಗಾಗಿ ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲʼ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

Tags:    

Similar News