ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲ; ವಿಪಕ್ಷಗಳ ಟೀಕೆ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕಳ್ಳದಂಧೆ ನಡೆಯುತ್ತದೆ. ಮಧ್ಯವರ್ತಿಗಳು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ದ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.;

Update: 2025-07-26 12:42 GMT

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬೆಂಗಳೂರು ನಗರ ಶಾಸಕರು ಸಭೆ ನಡೆಸಿದರು. 

ರಾಜ್ಯದ ವಿವಿಧ ಜಿಲ್ಲೆಗಳಿಗೆ ಎಷ್ಟು ರಸಗೊಬ್ಬರ ಪೂರೈಸಬೇಕು ಎಂಬುದರ ಬಗ್ಗೆ ಸರ್ಕಾರ ಪೂರ್ವತಯಾರಿ ಮಾಡಿಕೊಳ್ಳದೇ ರೈತರಲ್ಲಿ ಆತಂಕ ಸೃಷ್ಟಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.  

ಬೆಂಗಳೂರಿನಲ್ಲಿ ಶನಿವಾರ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೆ ದುಪ್ಪಟ್ಟು ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕಳ್ಳದಂಧೆ ನಡೆಯುತ್ತದೆ. ಮಧ್ಯವರ್ತಿಗಳು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದು, ಇದರಿಂದ  ರೈತರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಕೂಡಲೇ ರೈತರಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಶುಕ್ರವಾರ (ಜು.25) ಹೇಳಿದ್ದರು. ಆದರೂ, ಕೆಲವೆಡೆ ರೈತರು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ವೈಫಲ್ಯವೇ ನೇರ ಕಾರಣ. ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಜು.25) ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಗೊಬ್ಬರ ಪೂರೈಸುವಂತೆ ಮನವಿ ಮಾಡಿದ್ದರು. ಈ ಬಾರಿ ಮುಂಗಾರು ಅವಧಿ ಪೂರ್ವ ಪ್ರಾರಂಭವಾಗುವುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿಲ್ಲ. ಗುಲ್ಬರ್ಗ, ಗದಗ, ಕೊಪ್ಪಳ, ದಾವಣಗೆರೆ ಮೊದಲಾದ ಕಡೆಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಸಿಎಂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಅಗತ್ಯಕ್ಕಿಂತ ಹೆಚ್ಚು ಪೂರೈಕೆ

ಜುಲೈ ಅಂತ್ಯಕ್ಕೆ ರಾಜ್ಯಕ್ಕೆ 6,31,000 ಮೆಟ್ರಿಕ್‌ ಟನ್ ರಸಗೊಬ್ಬರ ಬೇಕಿತ್ತು. ಆದರೆ, ಕೇಂದ್ರದಿಂದ 8,73,000 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರದಿಂದ ನೀಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. 

ಬೆಂಗಳೂರಿನ ಸಮಸ್ಯೆಗಳ ಚರ್ಚೆ

ಬೆಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ವೈಜ್ಞಾನಿಕವಾಗಿ ಆಲೋಚಿಸಿಲ್ಲ. ಭೂಗತ ಟನಲ್ ರಸ್ತೆ, ಬಿಬಿಎಂಪಿಯನ್ನು ಐದು ವಿಭಾಗವಾಗಿ ಮಾಡುವ ತೀರ್ಮಾನವು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ. ಮುಂಬೈ, ದೆಹಲಿ ಸೇರಿದಂತೆ ಮತ್ತಿತರ ಮಹಾನಗರಗಳಲ್ಲಿ ಇಂತಹ ಪ್ರಯೋಗ ಮಾಡಿ ವಿಫಲವಾಗಿವೆ. ಸರ್ಕಾರದ ಈ ತೀರ್ಮಾನವನ್ನು ಬಿಜೆಪಿ ವಿರೋಧಿಸಿತ್ತು, ಮುಂದೆಯೂ ವಿರೋಧಿಸಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಭೂಗತ ಟನೆಲ್ ರಸ್ತೆಯ ಸಾಧಕ ಬಾಧಕವನ್ನು ಚರ್ಚೆ ಮಾಡದೆ ಆತುರವಾಗಿ ಟೆಂಡರ್ ಕರೆಯಲು ಹೊರಟಿರುವುದು ಸರಿಯಲ್ಲ. ಕಪ್ಪುಪಟ್ಟಿಯಲ್ಲಿರುವ ಕಂಪನಿಗಳಿಗೆ ಟೆಂಡರ್‌ ಕೊಡಲು ಸಿಎಂ ಹಾಗೂ ಡಿಸಿಎಂ ನಿರ್ಧರಿಸಿರುವುದರ ಹಿಂದೆ ಅಭಿವೃದ್ಧಿಯ ಚಿಂತನೆ ಇದೆಯೇ ಅಥವಾ ಬೇರೆ ಉದ್ದೇಶ ಇದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸಾವಿರಾರು ಮನೆಗಳಿಗೆ ಬೆಸ್ಕಾಂ ಎನ್‍ಒಸಿ ಸಿಗದೆ ಗೃಹ ಪ್ರವೇಶ ಮಾಡಲು ಸಾಧ್ಯವಾಗದೆ ಮನೆ ಮಾಲೀಕರು ಪರದಾಡುವಂತಾಗಿದೆ ಎಂದಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಕೆ ಬೇಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಕೆ ಮಾಡಿ ಅವರಿಗೆ ಅಪಮಾನ ಮಾಡಬಾರದು. ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ರಾಜ್ಯದ ಜನರು ನೋಡಿದ್ದಾರೆ. ಸಿಎಂ ಪುತ್ರ ಯತೀಂದ್ರ ಹುಚ್ಚು ಹೇಳಿಕೆ ನೀಡುವ ಮೂಲಕ  ತಂದೆಯನ್ನು ಅಟ್ಟಕ್ಕೇರಿಸುವ ಕೆಲಸ ಮಾಡುತ್ತಿದ್ದಾರೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ ಎಂದು ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Tags:    

Similar News