ಆರ್‌ಸಿಬಿ ಕಾಲ್ತುಳಿತ : ಶವ ಪರೀಕ್ಷೆ ವೇಳೆ ಮೃತ ಬಾಲಕಿಯ ಮೈಮೇಲಿದ್ದ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು!

ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ದಿವ್ಯಾಂಶಿಯ ಚಿನ್ನದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.;

Update: 2025-07-24 10:47 GMT

ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಬಾಲಕಿ ದಿವ್ಯಾಂಶಿ ಅವರ ಮೈಮೇಲಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳುವಾಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಗಳ ಸಾವಿನ ದುಃಖದಲ್ಲಿದ್ದ ಕುಟುಂಬಕ್ಕೆ ಇದೀಗ ಆಕೆಯ ಆಭರಣಗಳು ಕಳ್ಳತನವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಸಂಬಂಧ ಮೃತ ಬಾಲಕಿಯ ತಾಯಿ ಆಶ್ವಿನಿ ಶಿವಕುಮಾರ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್ 4ರಂದು ನಡೆದ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾಂಶಿ ಮೃತಪಟ್ಟಿದ್ದರು. ಆಕೆಯ ಮರಣೋತ್ತರ ಪರೀಕ್ಷೆಯನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯುವಾಗ ಆಕೆಯ ದೇಹದ ಮೇಲಿದ್ದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೃತದೇಹದ ಮೇಲೆ ಸುಮಾರು ಆರು ಗ್ರಾಂ ತೂಕದ ಚಿನ್ನದ ಕಿವಿ ಓಲೆ ಮತ್ತು ಆರು ಗ್ರಾಂ ತೂಕದ ಚಿನ್ನದ ಸರ ಇತ್ತು. ಇವುಗಳ ಒಟ್ಟು ಮೌಲ್ಯ ಸುಮಾರು 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಶವಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸುವಾಗ ಈ ಚಿನ್ನಾಭರಣಗಳು ಇರಲಿಲ್ಲ. "ಮಗಳ ಸಾವಿನಿಂದ ನಾವು ತೀವ್ರ ದುಃಖದಲ್ಲಿದ್ದೆವು, ಹಾಗಾಗಿ ಆಭರಣಗಳು ಕಳುವಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಆಸ್ಪತ್ರೆಯ ಶವಾಗಾರದಲ್ಲಿಯೇ ಈ ಕಳ್ಳತನ ನಡೆದಿದೆ. ದಯವಿಟ್ಟು ಅವುಗಳನ್ನು ಹುಡುಕಿಕೊಡಬೇಕು," ಎಂದು ತಾಯಿ ಅಶ್ವಿನಿ ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಜೂನ್ 4ರಂದು ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರಿಂದ ಕ್ರೀಡಾಂಗಣದೊಳಗೆ ಪ್ರವೇಶಿಸಲು ನೂಕುನುಗ್ಗಲು ಉಂಟಾಗಿ, 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಮೃತಪಟ್ಟವರಲ್ಲಿ ಬಾಲಕಿ ದಿವ್ಯಾಂಶಿ ಕೂಡ ಒಬ್ಬರಾಗಿದ್ದರು[1].

ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಸಂಬಂಧಪಟ್ಟವರನ್ನು ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Tags:    

Similar News