Social Media Post | ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ನಿಂದನೆ: ಪೊಲೀಸ್ ದೂರು
ಆರ್ ಸಿ ಬಿ ಅನ್ ಬಾಕ್ಸಿಂಗ್ ಇವೆಂಟ್ ಗೆ ಅಶ್ವಿನಿ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವುದೇ ಆರ್ ಸಿಬಿ ಸೋಲಿಗೆ ಕಾರಣ ಎಂಬರ್ಥದಲ್ಲಿ ʼಗಜಪಡೆʼ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.;
ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಫೋಟೋ ಇರುವ ʼಗಜಪಡೆʼ ಎಂಬ ಹೆಸರಿನ ಖಾತೆಯ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಬಳಸುವ ನಿಂದನೆ ಬಳಸಿ ಅಶ್ವಿನಿ ಅವರಿಗೆ ಅವಮಾನ ಮಾಡಲಾಗಿದ್ದು, ದರ್ಶನ್ ಅಭಿಮಾನಿಯ ಮಹಿಳಾ ವಿರೋಧಿ ನಡೆಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಆರ್ ಸಿ ಬಿ ಅನ್ ಬಾಕ್ಸಿಂಗ್ ಇವೆಂಟ್ ಗೆ ಅಶ್ವಿನಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆರ್ ಸಿಬಿ ಸೋಲಿಗೆ ಗಂಡನನ್ನು ಕಳೆದುಕೊಂಡಿರುವ ಅಶ್ವಿನಿ ಅವರು ಬಂದಿರುವುದೇ ಕಾರಣ ಎಂಬರ್ಥದಲ್ಲಿ ʼಗಜಪಡೆʼ ಎಂಬ ಎಕ್ಸ್ (ಟ್ವಿಟರ್) ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಈ ʼಗಜಪಡೆʼ ಎಂಬ ಖಾತೆಯ ಪ್ರೊಫೈಲ್ ಚಿತ್ರದಲ್ಲಿ ನಟ ದರ್ಶನ್ ಫೋಟೋ ಹಾಕಿಕೊಂಡಿದ್ದು, ಅದು ನಟ ದರ್ಶನ್ ಅಭಿಮಾನಿಗಳದ್ದೇ ಖಾತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು.
ದೂರು ನೀಡಿದ ಅಪ್ಪು ಫ್ಯಾನ್ಸ್
ಈ ಟ್ವೀಟ್ ನಿಂದ ಆಕ್ರೋಶಗೊಂಡಿರುವ ಪುನೀತ್ ರಾಜಕುಮಾರ್ ಅಭಿಮಾನಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದು, ʼಅಪ್ಪು ಹುಡುಗರು ಕರ್ನಾಟಕ’ ಎಂಬ ಅಭಿಮಾನಿ ಸಂಘದ ವತಿಯಿಂದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
"ಕಳೆದ ಮಾರ್ಚ್ 19ರಂದು ಬೆಂಗಳೂರಿನ ಆರ್‌ಸಿಬಿ ತಂಡದ ಜೆರ್ಸಿ ಉದ್ಘಾಟನೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಐಪಿಎಲ್ ಪ್ರಾರಂಭವಾಗಿ ಆರ್‌ಸಿಬಿ ತಂಡವು ಕೆಲ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಕಾರಣ ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ‘ಗಜ ಪಡೆ’ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದೇ ಆರ್‌ಸಿಬಿ ತಂಡದ ಸೋಲಿಗೆ ಕಾರಣ ಎಂದು ಅಶ್ವಿನಿ ಅವರನ್ನು ಸೋಲಿನ ಹೊಣೆ ಮಾಡಿದ್ದು, ಅವರನ್ನು ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಲಾಗಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
"ತೀವ್ರ ವಿರೋಧ ವ್ಯಕ್ತವಾದಾಗ ಆ ನಕಲಿ ಖಾತೆಯ ಹೆಸರನ್ನು ‘ಸುದೀಪ್ ಅಭಿಮಾನಿ’ ಎಂದು ಬದಲಾಯಿಸಿ ಪುನೀತ್ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸಿರುತ್ತಾನೆ. ಈ ಘಟನೆಯಿಂದ ಕರ್ನಾಟಕದ ʼರಾಜವಂಶʼದ ಅಭಿಮಾನಿಗಳಿಗೆ ತುಂಬಾ ನೋವು ಉಂಟಾಗಿದೆ. ಹಾಗಾಗಿ ಅವನನ್ನು ಶೀಘ್ರದಲ್ಲಿ ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕಾಗಿ ಕೋರುತ್ತಿದ್ದೇವೆ" ಎಂದು ಅಭಿಮಾನಿಗಳು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಅಶ್ವಿನಿ ಜೊತೆ ಮಾತನಾಡಿದ ದರ್ಶನ್?
ವಿವಾದಾತ್ಮಕ ಟ್ವೀಟ್ ವೈರಲ್ ಆಗುತ್ತಿದ್ದಂತೆ, ಅದು ನಟ ದರ್ಶನ್ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ದರ್ಶನ್ ಅವರು ಬೇಸರ ವ್ಯಕ್ತಪಡಿಸಿದ್ದು, ಅಶ್ವಿನಿ ಅವರೊಂದಿಗೂ ಮಾತನಾಡಿದ್ದಾರೆ ಎಂದು ದರ್ಶನ್ ಅವರ ಆಪ್ತ ಮೂಲಗಳು ತಿಳಿಸಿವೆ.
ಅಶ್ವಿನಿ ಅವರ ವಿರುದ್ಧದ ಕೀಳು ಮಟ್ಟದ ಭಾಷಾ ಬಳಕೆಗೆ ಪ್ರಗತಿಪರರು, ಮಹಿಳಾ ಪರ ಕಾರ್ಯಕರ್ತರು, ಪುನೀತ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದು, ನಿಂದನಾತ್ಮಕ ಪೋಸ್ಟ್ ಹಾಕಿರುವ ಖಾತೆಯ ಅಡ್ಮಿನ್ ಅನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ನಟ ದರ್ಶನ್ ವಿರುದ್ಧವೂ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.