The Federal Karnataka Interview | ಸಾರಿಗೆ ನೌಕರರಿಗೆ ಸಮಾನ ವೇತನ : ಕಾರ್ಮಿಕರ ಹಿತದೃಷ್ಟಿಯಿಂದ ತೀರ್ಮಾನ: ಸಚಿವ ರಾಮಲಿಂಗಾರೆಡ್ಡಿ
ತಾಂತ್ರಿಕ ತೊಂದರೆಯಿಂದಾಗಿ ಸಾರಿಗೆ ಇಲಾಖೆ ಕೊಡುವ ಸ್ಮಾರ್ಟ್ ಕಾರ್ಡ್ ಸಮಸ್ಯೆ ಉಂಟಾಗಿದ್ದು, ಶೀಘ್ರ ಅದನ್ನು ಪರಿಹರಿಸುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.;
'ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಾರಿಗೆ ಇಲಾಖೆ ಸಿಬ್ಬಂದಿಗೆ ಸಮಾನ ವೇತನ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಅದರ ಕುರಿತು ತೀರ್ಮಾನ ಆಗಬೇಕಾಗಿದೆ.'
ಇದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ನೌಕರರಿಗೆ ನೀಡಿದ ಭರವಸೆ. 'ದ ಫೆಡರಲ್ ಕರ್ನಾಟಕ'ಕ್ಕೆ ಕೊಟ್ಟಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಕೆಲವರು ಸಮಾನ ವೇತನದ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಕೆಲವರು 4 ವರ್ಷಗಳಿಗೊಮ್ಮೆ ಆಗುವ ವೇತನ ಪರಿಷ್ಕರಣೆ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಯಾವುದೇ ತೀರ್ಮಾನ ತೆಗೆದುಕೊಂಡರೂ ಕಾರ್ಮಿಕರ ಹಿತದೃಷ್ಟಿಯಿಂದ ತೆಗೆದುಕೊಳ್ಳುತ್ತೇವೆ' ಎಂದು ಆಶ್ವಾಸನೆ ನೀಡಿದ್ದಾರೆ.
ಜೊತೆಗೆ ರಾಜ್ಯದಲ್ಲಿ ನೋಂದಣಿ ಆಗುವ ವಾಹನಗಳು ಹಾಗೂ ಡ್ರೈವಿಂಗ್ ಲೈಸನ್ಸ್ ಪರವಾನಗಿ ಸ್ಮಾರ್ಟ್ ಕಾರ್ಡ್ಗಳ ವಿತರಣೆಯಲ್ಲಿ ವಿಳಂಬವಾಗುತ್ತಿರುವುದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು. ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬವಚಾಗಿರುವುದು ನಿಜ. ಆ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದಿದ್ದಾರೆ.
ಸ್ಮಾರ್ಟ್ ಕಾರ್ಡ್
ಸ್ಮಾರ್ಟ್ ಕಾರ್ಡ್ ಮುದ್ರಣ ಮಾಡಿ ಕೊಡುತ್ತಿದ್ದವರ ಟೆಂಡರ್ ಅವಧಿ ಮುಗಿದಿದೆ. ಟೆಂಡರ್ ಕರೆದ ಸಂದರ್ಭದಲ್ಲಿ ಟೆಂಡರ್ನಲ್ಲಿ ಭಾಗವಹಿಸದಿದ್ದ ಮೂರನೇ ವ್ಯಕ್ತಿ ಕೋರ್ಟ್ಗೆ ಹೋಗಿದ್ದರು. ಅವರು ಹಾಕಿರುವ ಕೇಸ್ ಈಗ ವಜಾ ಆಗಿದೆ. ಆ ಕಾರಣಕ್ಕಾಗಿ ನಾವು ಸ್ಮಾರ್ಟ್ ಕಾರ್ಡ್ ಕೊಡುವುದು ವಿಳಂಬವಾಗಿದೆ. ಈ ಹಿಂದೆ ಟೆಂಡರ್ ಪಡೆದಿದ್ದವರೇ ಈಗ ಉಳಿದಿರುವ ಸ್ಮಾರ್ಟ್ ಕಾರ್ಡ್ಗಳನ್ನು ಮುದ್ರಿಸಿ ಕೊಡುತ್ತಾರೆ. ಈ ಸಮಸ್ಯೆಯಿಂದ ಜನರಿಗೆ ತೊಂದರೆ ಆಗಿರುವುದು ನಿಜ. ಶೀಘ್ರ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಷ್ಟ್ರೀಯ ಆರೋಗ್ಯ ವಿಮೆಯಿಂದ ನಮ್ಮ ಇಲಾಖೆಯಲ್ಲಿರುವ 1 ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಗೆ ಉಪಯೋಗವಾಗಲಿದೆ. ಸಿಬ್ಬಂದಿಯನ್ನು ಅವಲಂಬಿಸಿದವರು ಸುಮಾರು 5-6 ಲಕ್ಷ ಜನರಿದ್ದಾರೆ. ಡ್ರೈವರ್, ಕಂಡಕ್ಟರ್ಗಳು ಹಾಗೂ ಉಳಿದ ಸಿಬ್ಬಂದಿ ಪ್ರತಿ ತಿಂಗಳು ತಮ್ಮ ವೇತನದಿಂದಲೇ 650 ರೂಪಾಯಂತೆ ವರ್ಷಕ್ಕೆ 8 ಸಾವಿರ ರೂಪಾಯಿಗಳನ್ನು ಕಟ್ಟುತ್ತಾರೆ. ಹೀಗಾಗಿ ಅದೇ ಹಣವನ್ನು ಉಪಯೋಗಿಸಿಕೊಂಡು ಕ್ಯಾಶ್ಲೆಸ್ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದ್ದೇವೆ. ಈಗ 300ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ನಾವು ಒಡಂಬಡಿಕೆ ಮಾಡಿಕೊಂಡಿದ್ದೇವೆ. ಈ ಆಸ್ಪತ್ರೆಗಳಲ್ಲಿ ನಮ್ಮ ಸಿಬ್ಬಂದಿ ಹಣವಿಲ್ಲದೆ, ಅಂದರೆ ಕ್ಯಾಶ್ ಲೆಸ್ ಚಿಕಿತ್ಸೆ ಪಡೆಯಬಹುದು. ನಂತರ ಇಲಾಖೆ ಅದನ್ನು ಆಸ್ಪತ್ರೆಗೆ ಭರಿಸುತ್ತದೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ದ ಫೆಡರಲ್ ಕರ್ನಾಟಕದ ಜತೆ ನಡೆಸಿದ ಮಾತುಕತೆಯ ಪೂರ್ಣಪಾಠ ಇಲ್ಲಿದೆ.