ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಎಸ್.ಎಲ್.ಭೈರಪ್ಪ ಲೀನ
ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಿಂದ ಮೂರು ಬಸ್‌ಗಳಲ್ಲಿ 150ಕ್ಕೂ ಹೆಚ್ಚು ಗ್ರಾಮಸ್ಥರು ಆಗಮಿಸಿದ್ದರು. ಸಾಹಿತ್ಯ ಪ್ರೇಮಿಗಳು, ಅಭಿಮಾನಿಗಳು ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಖ್ಯಾತ ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಹೊಯ್ಸಳ ಬ್ರಾಹ್ಮಣ ಸಮುದಾಯದ ವಿಧಿವಿಧಾನಗಳಂತೆ ನೆರವೇರಿಸಲಾಯಿತು.
ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರ್ಕಾರದ ಪರವಾಗಿ ಗೌರವ ಸಲ್ಲಿಸಿದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸ್ಥಳೀಯ ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ಎಸ್.ಎಲ್.ಭೈರಪ್ಪ ಅವರ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ರಾಷ್ಟ್ರಧ್ವಜವನ್ನು ಪ್ರಹ್ಲಾದ್ ಜೋಶಿ ಮತ್ತು ಡಾ. ಎಚ್.ಸಿ. ಮಹದೇವಪ್ಪ ಅವರು ಭೈರಪ್ಪ ಅವರ ಪುತ್ರರಾದ ರವಿಶಂಕರ್ ಮತ್ತು ಉದಯ್ ಶಂಕರ್ ಅವರಿಗೆ ಹಸ್ತಾಂತರಿಸಿದರು.
ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಿಂದ ಮೂರು ಬಸ್‌ಗಳಲ್ಲಿ 150ಕ್ಕೂ ಹೆಚ್ಚು ಗ್ರಾಮಸ್ಥರು ಆಗಮಿಸಿದ್ದರು. ಸಾಹಿತ್ಯ ಪ್ರೇಮಿಗಳು, ಅಭಿಮಾನಿಗಳು ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮಠಾಧೀಶರು, ಗಣ್ಯರಿಂದ ಸಂತಾಪ
ಓದುಗರಿಗೆ ಭೈರಪ್ಪ ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ. ಭಾರತ ದರ್ಶನ, ಪ್ರಾಚೀನ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವುದು ಅವರ ಚಿಂತನೆ, ಕೃತಿಗಳಲ್ಲಿ ಪ್ರತಿಧ್ವನಿಸಿವೆ. ಅವರ ಕೃತಿಗಳು ಸಂಸ್ಕೃತವೂ ಸೇರಿ ಅನೇಕ ದೇಶೀಯ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯತೆ ಗಳಿಸಿವೆ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಎಸ್.ಎಲ್. ಭೈರಪ್ಪ ಅವರು 13ನೇ ವಯಸ್ಸಿನಲ್ಲೇ ಗಾಂಧೀಜಿಯವರ ಆದರ್ಶಗಳಿಂದ ಆಕರ್ಷಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರು. ಹುಟ್ಟೂರಾದ ಸಂತೇಶಿವರದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಲು ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಸ್ಥಾಪಿಸಿದ್ದರು. ಹುಟ್ಟೂರಿಗೆ ಕುಡಿಯುವ ನೀರಿನ ಕಾಯಂ ಯೋಜನೆ ಕಾರ್ಯಗತಗೊಳಿಸಿದ್ದರು ಎಂದು ಸ್ಮರಿಸಿದರು.
ಮೈಸೂರು ರಾಜವಶಂಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಮಾತನಾಡಿ, ಸಾಹಿತ್ಯ ಲೋಕದ ಅನರ್ಥ್ಯ ರತ್ನ ಎಸ್.ಎಲ್.ಭೈರಪ್ಪ ಅವರು. ಮೈಸೂರಿನ ಮುಕುಟಮಣಿಯಂತಿದ್ದ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದರು. ಅವರ ಕಾದಂಬರಿಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ ಎಂದು ಹೇಳಿದರು.