ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಲು ಎಸ್‌ಐಟಿ ಚಾರ್ಜ್‌ಶೀಟ್‌ನ ಅಂಶಗಳೇ ಕಾರಣ; ಏನೇನು ಆರೋಪಗಳಿದ್ದವು?

ಇದರಲ್ಲಿ 113 ಸಾಕ್ಷಿಗಳ ಹೇಳಿಕೆಗಳು, ಫೊರೆನ್ಸಿಕ್ ವರದಿಗಳು, ಮತ್ತು ಪ್ರಜ್ವಲ್ ಅವರ ಮೊಬೈಲ್‌ನಿಂದ ಸಂಗ್ರಹಿಸಲಾದ ಡಿಜಿಟಲ್ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿತ್ತು.;

Update: 2025-08-02 13:33 GMT

ದೇಶವನ್ನೇ ಬೆಚ್ಚಿಬೀಳಿಸಿದ್ದ ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾಗಿದೆ. ಕೋರ್ಟ್​ ಈ ತೀರ್ಪು ನೀಡುವಲ್ಲಿ ಐಪಿಎಸ್​ ಅಧಿಕಾರಿ ಬಿ. ಕೆ ಸಿಂಗ್​ ನೇತೃತ್ವ ಎಸ್​​ಐಟಿ ತಂಡ ಸಲ್ಲಿಸಿದ್ದ ಜಾರ್ಜ್​ ಶೀಟ್​ ಪ್ರಮುಖ ಕಾರಣ ಎನ್ನಬಹುದು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಗಳು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮೇಲಿನ ಆರೋಪಗಳ ಭಯಾನಕ ಸ್ವರೂಪವನ್ನು ಬಯಲಿಗೆಳೆದಿದ್ದವು. ಸಂತ್ರಸ್ತರ ಹೇಳಿಕೆಗಳು ಮತ್ತು ಬಲವಾದ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ, ಎಸ್‌ಐಟಿ ಎರಡು ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು.

ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದ ಎಸ್‌ಐಟಿ

ತಮ್ಮ ಆರೋಪಗಳನ್ನು ಸಾಬೀತುಪಡಿಸಲು, ಎಸ್‌ಐಟಿಯು 2,144 ಪುಟಗಳ ಮತ್ತು 1,632 ಪುಟಗಳ ಎರಡು ಬೃಹತ್ ಆರೋಪಪಟ್ಟಿಗಳನ್ನು ಸಲ್ಲಿಸಿತ್ತು. ಇದರಲ್ಲಿ 113 ಸಾಕ್ಷಿಗಳ ಹೇಳಿಕೆಗಳು, ಫೊರೆನ್ಸಿಕ್ ವರದಿಗಳು, ಮತ್ತು ಪ್ರಜ್ವಲ್ ಅವರ ಮೊಬೈಲ್‌ನಿಂದ ಸಂಗ್ರಹಿಸಲಾದ ಡಿಜಿಟಲ್ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿತ್ತು. ಈ ದೋಷಾರೋಪ ಪಟ್ಟಿಗಳೇ ಪ್ರಕರಣದ ವಿಚಾರಣೆಯ ಆಧಾರಸ್ತಂಭವಾಗಿ, ಅಂತಿಮವಾಗಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಸಾಬೀತುಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು.

ಆರೋಪಗಳು ಏನು?

ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡು, ಮನೆಗೆಲಸದ ಮಹಿಳೆಯ ಮೇಲೆ ಬೆಂಗಳೂರು ಮತ್ತು ಹೊಳೆನರಸೀಪುರದ ಮನೆಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ವಿವರಿಸಲಾಗಿತ್ತು.

ಅತ್ಯಾಚಾರದ ಕೃತ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ನಂತರ ಅದೇ ವಿಡಿಯೋಗಳನ್ನು ತೋರಿಸಿ ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. "ನಾನು ಸಂಸದ, ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ಹೊರಗೆ ಹೇಳಿದರೆ ನಿನ್ನ ಪತಿಯನ್ನು ಜೈಲಿಗೆ ಕಳುಹಿಸುತ್ತೇನೆ ಮತ್ತು ನಿನ್ನ ಮಗಳಿಗೂ ಇದೇ ಗತಿ ಕಾಣಿಸುತ್ತೇನೆ" ಎಂದು ಪ್ರಾಣಬೆದರಿಕೆ ಹಾಕಿದ್ದರು ಎಂದು ಎಸ್‌ಐಟಿ ಉಲ್ಲೇಖಿಸಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಕಾನೂನಿನಿಂದ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದಲೇ ಪ್ರಜ್ವಲ್ ವಿದೇಶಕ್ಕೆ ಪಲಾಯನ ಮಾಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ನಮೂದಿಸಲಾಗಿತ್ತು.

ಎಚ್.ಡಿ. ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಇದೇ ಪ್ರಕರಣದಲ್ಲಿ ಪ್ರಜ್ವಲ್ ತಂದೆ ಎಚ್.ಡಿ. ರೇವಣ್ಣ ಅವರ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿತ್ತು. ತಮ್ಮ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ, ಹೊಳೆನರಸೀಪುರದ ಮನೆಯಲ್ಲಿ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಅವರ ಕೈಹಿಡಿದು ಎಳೆದು, ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದರು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿತ್ತು.

Tags:    

Similar News