ಸಿರಿಗೆರೆ ಗದ್ದುಗೆ ವಿವಾದ | ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ: ಬಿ ಸಿ ಪಾಟೀಲ್‌

ರಾಜ್ಯದ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಸಿರಿಗೆರೆ ಮಠದ ಗದ್ದುಗೆ ವಿಷಯದಲ್ಲಿ ಭಕ್ತರು ಮತ್ತು ಸ್ವಾಮೀಜಿಗಳ ನಡುವೆ ಭುಗಿಲೆದ್ದಿರುವ ವಿವಾದ ದಿನದಿನಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಸ್ವತಃ ಸ್ವಾಮೀಜಿ ವಿರುದ್ಧವೇ ಮಾನನಷ್ಟ ಮೊಕದ್ದಮೆ ದಾಖಲಿಸಲು ಮಠದ ಭಕ್ತರ ಒಂದು ಬಣ ಮುಂದಾಗಿದೆ.;

Update: 2024-08-10 08:14 GMT

ರಾಜ್ಯದ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಸಿರಿಗೆರೆ ಮಠದ ಗದ್ದುಗೆ ವಿಷಯದಲ್ಲಿ ಭಕ್ತರು ಮತ್ತು ಸ್ವಾಮೀಜಿಗಳ ನಡುವೆ ಭುಗಿಲೆದ್ದಿರುವ ವಿವಾದ ದಿನದಿನಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಸ್ವತಃ ಸ್ವಾಮೀಜಿ ವಿರುದ್ಧವೇ ಮಾನನಷ್ಟ ಮೊಕದ್ದಮೆ ದಾಖಲಿಸಲು ಮಠದ ಭಕ್ತರ ಒಂದು ಬಣ ಮುಂದಾಗಿದೆ.

ಸ್ವಾಮೀಜಿಗಳು ಪೀಠತ್ಯಾಗ ಮಾಡಬೇಕು, ಮಠಕ್ಕೆ ಉತ್ತರಾಧಿಕಾರಿಗಳ ನೇಮಕವಾಗಬೇಕು ಎಂದು ಹೋರಾಟಕ್ಕೆ ಮುಂದಾಗಿರುವ ಬಣದ ಪ್ರಮುಖರಲ್ಲಿ ಒಬ್ಬರಾದ ಸಮುದಾಯದ ನಾಯಕ, ಮಾಜಿ ಸಚಿವ ಬಿ ಸಿ ಪಾಟೀಲ್ ಅವರು, ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಮಾತನಾಡಿದ್ದು, ಮಠದ ಪರವಾಗಿ ದಾವಣಗೆರೆಯಲ್ಲಿ ಕಳೆದ ವಾರ ಸಭೆ ನಡೆಸಿದ ಮಠದ ಭಕ್ತರನ್ನು ʼಕುಡುಕರೆಂದುʼ ನಿಂದಿಸಿರುವ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಭಕ್ತರು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪಾಟೀಲ್ ಮತ್ತು ಇತರ ಪ್ರಮುಖರು, “ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಏಕವ್ಯಕ್ತಿ ಹೆಸರಿನಲ್ಲಿ ಟ್ರಸ್ಟ್ ರಚಿಸಿಕೊಂಡು ಸರ್ವಾಧಿಕಾರಿಯಂತೆ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಮಠದ ಭಕ್ತರನ್ನು ಕುಡುಕರೆಂದು ನಿಂದಿಸಿರುವ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಭಕ್ತರು ನಿರ್ಧರಿಸಿದ್ಧಾರೆ” ಎಂದು ಘೋಷಿಸಿದ್ದಾರೆ.

ಮಠದ ಹೆಸರನ್ನು ಕೂಡ ಬದಲಾಯಿಸಲಾಗಿದೆ ಎಂದು ಸ್ವಾಮೀಜಿ ವಿರುದ್ಧ ಆರೋಪ ಮಾಡಿದ ಪಾಟೀಲ್, “ʼಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀಮಠ ಪಾಲ್ಕುರಿಕೆ-ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠʼ ಎಂಬ ಹೆಸರನ್ನು ಈಗಿನ ಪೀಠಾಧಿಪತಿಗಳಾಗಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ʼಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠʼ ಎಂದು ಬದಲಾಯಿಸಿದ್ದಾರೆ. ಅಲ್ಲದೆ, 1990ರಲ್ಲಿ ಏಕವ್ಯಕ್ತಿ ಟ್ರಸ್ಟ್ ರಚಿಸಿಕೊಂಡು ಮಠದ ಆಸ್ತಿಯನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಎಲ್ಲವನ್ನು ಮಠದ ಮೂಲ ಟ್ರಸ್ಟ್ ಬೈ-ಲಾವನ್ನು ಉಲ್ಲಂಘಿಸಿ ಮಾಡಲಾಗಿದೆ” ಎಂದು ಹೇಳಿದ್ದಾರೆ.

“ಮಠದ ಬೈ-ಲಾ ಪ್ರಕಾರ ಚುನಾವಣೆಯ ಮೂಲಕ ಸಂಘದ ಸಮಿತಿ ರಚಿಸಬೇಕಿತ್ತು. ಆದರೆ ಸ್ವಾಮೀಜಿ ತಮಗೆ ಬೇಕಾದವರನ್ನು ಅಧ್ಯಕ್ಷರು, ಕಾರ್ಯಕಾರಿ ಮಂಡಳಿಗೆ ನೇಮಿಸುತ್ತಿದ್ದಾರೆ. 30 ವರ್ಷಗಳಿಂದ ಸಂಘದ ಸದಸ್ಯತ್ವ ನೋಂದಣಿಯನ್ನೇ ಮಾಡಿಲ್ಲ. ಸ್ವಾಮೀಜಿಗಳ ಇಂತಹ ನಿಲುವುಗಳನ್ನು ಖಂಡಿಸಿ ಆ.4ರಂದು ದಾವಣಗೆರೆಯಲ್ಲಿ ಸಮಾಜದ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಭಕ್ತರನ್ನು ಸ್ವಾಮೀಜಿ, ಕುಡುಕರು ಎಂದು ನಿಂದಿಸಿದ್ದಾರೆ. ಈ ಹೇಳಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಅಂದು ಸಭೆಯಲ್ಲಿ ಭಾಗವಹಿಸಿದ್ದ ಭಕ್ತರು ನಿರ್ಧರಿಸಿದ್ದೇವೆ” ಎಂದು ಪಾಟೀಲ್ ಹೇಳಿದ್ದಾರೆ.

“ಮಠದ ಬೈ-ಲಾದ ಪ್ರಕಾರ 60 ವರ್ಷಕ್ಕೆ ಸ್ವಾಮೀಜಿಗಳು ಪೀಠ ತ್ಯಾಗ ಮಾಡಿ ಉತ್ತರಾಧಿಕಾರಿಯನ್ನು ನೇಮಿಸಬೇಕು. ಆದರೆ, 78 ವರ್ಷವಾದರೂ ಶಿವಮೂರ್ತಿ ಸ್ವಾಮೀಜಿ ಪೀಠ ತ್ಯಾಗ ಮಾಡದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಮಠದ ಭಕ್ತರನ್ನು ಒಡೆದು ಎರಡು ಗುಂಪುಗಳನ್ನಾಗಿ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಅಣಬೇರು ರಾಜಣ್ಣ, ಉಮೇಶ್‌ ಬಣಕಾರ್‌, ಲಿಂಗರಾಜು, ಬಿ ಸಿ ರಾಜಪ್ಪ, ಗುರುಸ್ವಾಮಿ, ಷಣ್ಮುಖಪ್ಪ, ಶಿವಕುಮಾರಸ್ವಾಮಿ ಹಾಜರಿದ್ದರು.

Tags:    

Similar News