ಸಿದ್ದರಾಮಯ್ಯ ಅವರದ್ದು 90 ಪರ್ಸೆಂಟ್ ಕಮಿಷನ್ ಸರ್ಕಾರ: ಯತ್ನಾಳ್ ಆರೋಪ
ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಒಂದು ರಸ್ತೆಗೆ ಮಣ್ಣು ಹಾಕಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತು ಹೋಗಿವೆ. ಗ್ಯಾರೆಂಟಿ ಯೋಜನೆಗಳ ಹೆಸರಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನಡೆಸುತ್ತಿರುವುದು 90 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಒಂದು ರಸ್ತೆಗೆ ಮಣ್ಣು ಹಾಕಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತು ಹೋಗಿವೆ. ಗ್ಯಾರೆಂಟಿ ಯೋಜನೆಗಳ ಹೆಸರಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದರು. ಈಗ ಸಿದ್ದರಾಮಯ್ಯ ಅವರು ನಡೆಸುತ್ತಿರುವುದು 90 ಪರ್ಸೆಂಟ್ ಕಮಿಷನ್ ಸರ್ಕಾರ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಮದ್ಯ ಮಾರಾಟಗಾರರಿಂದ ತಿಂಗಳ ಮಾಮೂಲಿ ಪಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಇನು ಬಿಡಿಎ ನಿವೇಶನ ಹಂಚಿಕೆ ಮಾಡಲು ಪ್ರತಿ ಚದರಡಿಗೆ ಡಿ.ಕೆ.ಶಿವಕುಮಾರ್ ಅವರು 75 ರೂ. ವಸೂಲಿ ಮಾಡುತ್ತಿದ್ದಾರೆ. ಕಮಿಷನ್ ಕೊಡದಿದ್ದರೆ ನಿವೇಶನವನ್ನೇ ಕೊಡುವುದಿಲ್ಲ ಎಂದು ಆರೋಪಿಸಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಒಬ್ಬ ದಲಿತ ವ್ಯಕ್ತಿ ಬಂದು, ನನಗೆ ಬೊಮ್ಮಾಯಿ ಅವರು 5 ಲಕ್ಷದ ಮನೆ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಏನಿದರ ಅರ್ಥ ಎಂದು ಪ್ರಶ್ನಿಸಿದ ಅವರು, ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ13,500 ಜನರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ವರುಣಾದಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಅವರು ಕ್ಷೇತ್ರಕ್ಕೆ ಹೋದಾಗ ಏನೂ ಕೆಲಸ ಮಾಡಿಲ್ಲ ಎಂದೇ ಜನರು ಗಲಾಟೆ ಮಾಡಿದ್ದರು ಎಂದು ತಿರುಗೇಟು ನೀಡಿದರು.
ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ನೀರಾವರಿ ಬಿಲ್ ಮಂಜೂರು ಮಾಡಲು ಡಿ.ಕೆ. ಶಿವಕುಮಾರ್ ಅವರು 10 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ಬಿಜೆಪಿ ವಿರುದ್ಧ ನಿಂದನೆ ಮಾಡಲು ಕಾಂಗ್ರೆಸ್ಸಿನವರಿಗೆ ನಾಚಿಕೆ, ಮಾನ-ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.