ʼಪೊಲೀಸ್ ರನ್ʼಗೆ ಸಿದ್ದರಾಮಯ್ಯ ಚಾಲನೆ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಿಎಂ ಕರೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ 'ಪೊಲೀಸ್ ರನ್' ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು.;
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪೊಲೀಸ್ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ 'ಪೊಲೀಸ್ ರನ್' ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಗ್ರೀನ್ ಬೆಂಗಳೂರು, ಮಾದಕ ವ್ಯಸನ ಮುಕ್ತ ಸಮಾಜ, ಸೈಬರ್ ಕ್ರೈಮ್ ತಡೆ ಮತ್ತು ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯಕ್ಕಾಗಿ ಪೊಲೀಸ್ ಇಲಾಖೆ ಪ್ರತಿ ವರ್ಷ ಪೊಲೀಸ್ ಓಟವನ್ನು ಆಯೋಜಿಸಿ ಜಾಗೃತಿ ಮೂಡಿಸುತ್ತಾರೆ” ಎಂದರು.
ಪರಿಸರ ಸ್ನೇಹಿಯಾದ ಹಸಿರು ಬೆಂಗಳೂರು ನಿರ್ಮಾಣ ಮಾಡುವ ಅಗತ್ಯ ಇದೆ. ಬೆಂಗಳೂರಿನಲ್ಲಿ ಹಸಿರು ಕಡಿಮಾಗುತ್ತಿದೆ. ಅದನ್ನು ಹೆಚ್ಚಿಸಬೇಕಿದೆ. ಎಲ್ಲರ ದೈಹಿಕ ಕ್ಷಮತೆಗಾಗಿ ಓಟ ಅಗತ್ಯವಿದೆ. ಯುವಕರು ಸಮಾಜದಲ್ಲಿ ಅರ್ಧ ಸಂಖ್ಯೆಯಲ್ಲಿದ್ದಾರೆ. ಎಷ್ಟು ವರ್ಷ ಬದುಕುತ್ತೇವೆಯೋ ಅಷ್ಟು ವರ್ಷವೂ ಆರೋಗ್ಯವಂತರಾಗಿ ಜೀವಿಸಬೇಕು ಎಂದು ಅವರು ಹೇಳಿದರು.
ಯುವಜನಾಂಗ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಯುವಕ-ಯುವತಿಯರೇ ದೇಶದ ಸಂಪತ್ತು, ಅವರು ವ್ಯವಸನಿಗಳಾಗುತ್ತಿರುವುದು ದುರದೃಷ್ಟಕರ. ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಪ್ರಯತ್ನ ಸಾಕಾಗುವುದಿಲ್ಲ. ಸಮಾಜವೂ ಕೈಜೋಡಿಸಬೇಕು, ಹಾಗಾಗದಾಗ ಮಾತ್ರ ವ್ಯಸನ ಮುಕ್ತ ಮಾಡಲು ಸಾಧ್ಯವಾಗುತ್ತದೆ” ಎಂದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.