2028 ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ; ʼನವೆಂಬರ್‌ ಕ್ರಾಂತಿʼ ಬಿಜೆಪಿಯ ಬ್ರಾಂತಿ- ಜಮೀರ್‌

ನವೆಂಬರ್‌ನಲ್ಲಿ ಯಾವುದೇ ‘ಕ್ರಾಂತಿ’ ನಡೆಯುವುದಿಲ್ಲ. ಇದು ಸಂಪೂರ್ಣವಾಗಿ ಬಿಜೆಪಿ ಸೃಷ್ಟಿಸಿದ ಕಲ್ಪನೆ,” ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

Update: 2025-11-02 12:59 GMT

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ, 2028ರ ತನಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಆ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ನನ್ನದು ಎಂದು ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಕೊಪ್ಪಳದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಶಿವಕುಮಾರ್ ಅವರ ಅಭಿಮಾನಿಗಳಿಗೂ ಸಹ ಆ ಆಸೆ ಸಹಜವಾಗಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಬೆಂಬಲವಿದೆ. ಅವರು ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ. ಬಳಿಕ ಸಿಎಂ ಸ್ಥಾನ ಬೇರೆಯವರಿಗೆ ನೀಡುವ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ,” ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರು ದೇವಸ್ಥಾನಗಳಿಗೆ ತೆರಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರು ಅಪಾರ ದೈವಭಕ್ತರು. ದೇವಸ್ಥಾನಗಳಿಗೆ ಹೋಗುವುದು ಅವರ ಜೀವನದ ಭಾಗ. ಅದಕ್ಕೂ, ಸಿಎಂ ಸ್ಥಾನ ಪೈಪೋಟಿಗೂ ಯಾವುದೇ ಸಂಬಂಧವಿಲ್ಲ. ನವೆಂಬರ್‌ನಲ್ಲಿ ಯಾವುದೇ ‘ಕ್ರಾಂತಿ’ ನಡೆಯುವುದಿಲ್ಲ. ಇದು ಸಂಪೂರ್ಣವಾಗಿ ಬಿಜೆಪಿ ಸೃಷ್ಟಿಸಿದ ಕಲ್ಪನೆ,” ಎಂದು ಪ್ರತಿಕ್ರಿಯಿಸಿದರು.

ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದ ಅವರು, “ವಿಸ್ತರಣೆ ಆಗಬಹುದು. ಪಕ್ಷ ಸೂಚಿಸಿದರೆ ನಾನು ಸಚಿವ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ. ಶಿಸ್ತಿನ ಸಿಪಾಯಿಯಾಗಿ ಪಕ್ಷದ ಕೆಲಸ ಮಾಡುತ್ತೇನೆ,” ಎಂದರು.

ಬಿಜೆಪಿಯೊಳಗಿನ ಅಸಮಾಧಾನ ಉಲ್ಲೇಖಿಸಿ ಮಾತನಾಡಿದ ಅವರು, “ಬಿಜೆಪಿಯಲ್ಲಿ ಮೊದಲು ಎರಡು ಗುಂಪುಗಳಷ್ಟೇ ಇದ್ದವು. ಈಗ ಬಿ.ವೈ. ವಿಜಯೇಂದ್ರ, ಆರ್. ಅಶೋಕ, ಬಸನಗೌಡ ಪಾಟೀಲ ಯತ್ನಾಳ, ಕೆ.ಎಸ್. ಈಶ್ವರಪ್ಪ ಹೀಗೆ ಪ್ರತ್ಯೇಕ ಗುಂಪುಗಳಾಗಿವೆ. ಅವರು ಮೊದಲು ತಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ನಮ್ಮ ಬಗ್ಗೆ ಮಾತನಾಡಲಿ,” ಎಂದು ತಿರುಗೇಟು ನೀಡಿದರು.

Tags:    

Similar News