ಡಿಸಿಎಂ ವಿಚಾರ ಮುನ್ನಲೆಗೆ ತರಿಸಿದ್ದೇ ಸಿದ್ದರಾಮಯ್ಯ: ಬಿವೈ ವಿಜಯೇಂದ್ರ

Update: 2024-06-28 08:16 GMT

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸಚಿವರ ಮೂಲಕ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಮುನ್ನಲೆಗೆ ತರಿಸಿದ್ದಾರೆ. ಜನರ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವುದು ಬಿಟ್ಟು ಡಿಸಿಎಂ ಡಿಕೆ ಶಿವಕುಮಾರ್​​​ರನ್ನು ಬಲಿ ಕೊಡಲು ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಸಿದ್ದರಾಮಯ್ಯನವರು ಎಷ್ಟು ದಿನ ಸಿಎಂ ಆಗಿರುತ್ತಾರೋ ಗೊತ್ತಿಲ್ಲ. ಆದರೆ ರಾಜ್ಯದ ಅಭಿವೃದ್ಧಿ ಜೊತೆಗೆ ಜನರ ಸಮಸ್ಯೆ ಕೇಳಬೇಕಲ್ವಾ? ನಾವು ಇದನ್ನೇ ಕೇಳಿದರೆ ಸಿಎಂ ಉಡಾಫೆ ಉತ್ತರ ಕೊಡುತ್ತಿದ್ದಾರೆʼʼ ಎಂದರು.

ʻʻಒಕ್ಕಲಿಗರ ಸಂಘದ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಕ್ಕೆ ಪ್ರತ್ಯುತ್ತರವಾಗಿ ಸಚಿವರು ಉತ್ತರ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಟ್ಟಿಗೆ ಕಾಣುವುದೇನು, ಇಬ್ಬರು ಪರಸ್ಪರ ತಿಂಡಿ ತಿನ್ನಿಸುವುದೇನು, ಹೆಗಲ ಮೇಲೆ ಕೈ ಹಾಕೋದೇನು ಎಂಬಂತಿತ್ತು. ಆದರೆ ಈಗ ನೋಡಿ ಒಬ್ಬರಿಗೊಬ್ಬರು ಬುಡ ಕುಯ್ದುಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ನಿಂತುಕೊಂಡು ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬರುವ ದಿನಗಳಲ್ಲಿ ಇನ್ನೂ ಏನೇನು ಆಗುತ್ತದೋ ಕಾದು ನೋಡೋಣʼʼ ಎಂದು ಹೇಳಿದರು.

ʻʻಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹಾದಿ ಬೀದಿಯಲ್ಲಿ ಸಿಎಂ, ಡಿಸಿಎಂ, ಸಚಿವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಈಗ ಇರುವುದು ಹೋರಾಟದ ದಿನಗಳು. ಮುಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ನಾವು ಮಾಡುತ್ತೇವೆʼʼ ಎಂದು ಅವರು ಹೇಳಿದರು.

ʻʻವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಸತ್ಯನಾರಾಯಣ ಅವರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ ಇವತ್ತಿನವರೆಗೂ ನಾಗೇಂದ್ರರನ್ನು ಕರೆದು ವಿಚಾರಣೆ ಮಾಡುವ ಧೈರ್ಯವನ್ನು ಎಸ್​ಐಟಿ ತೋರಿಸಿಲ್ಲ. ಗುರುವಾರ ಕೋರ್ಟ್ ಕೂಡಾ ಸರ್ಕಾರಕ್ಕೆ ಛೀಮಾರಿ ಹಾಕಿದೆ" ಎಂದು ವಿಜಯೇಂದ್ರ ಹೇಳಿದರು.

Tags:    

Similar News