Showcause Notice | ಬಿಜೆಪಿ ರೆಬೆಲ್‌ ನಾಯಕರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾದ ಹೈಕಮಾಂಡ್‌; ಐವರಿಗೆ ಷೋಕಾಸ್‌ ನೋಟಿಸ್‌ ಜಾರಿ

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬಣದ ನಾಯಕರಿಗೆ ಬಿಜೆಪಿಯ ಕೇಂದ್ರ ಶಿಸ್ತುಪಾಲನಾ ಸಮಿತಿ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ಬಂಡಾಯ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರಿಗೆ ನೋಟಿಸ್‌ ನೀಡಿದ್ದು, ಶಿಸ್ತುಕ್ರಮದ ಎಚ್ಚರಿಕೆ ರವಾನಿಸಿದೆ.;

Update: 2025-03-25 17:04 GMT

ರಾಜ್ಯ ಬಿಜೆಪಿಯ ರೆಬಲ್‌ ನಾಯಕರಿಗೆ ಹೈಕಮಾಂಡ್‌ ಬಿಸಿ ಮುಟ್ಟಿಸಿದೆ. ಪಕ್ಷ ವಿರೋಧಿ ಚಟುವಟಿಕೆ ಹಾಗೂ ಬಿಜೆಪಿ ನಾಯಕತ್ವದ ಕುರಿತು ಬಹಿರಂಗ ಹೇಳಿಕೆ ನೀಡುವುದಲ್ಲದೇ ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಪ್ರದರ್ಶಿಸಿದ ಆರೋಪದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದ ನಾಯಕರು ಹಾಗೂ ಇಬ್ಬರು ಬಂಡಾಯ ಶಾಸಕರಿಗೆ ಬಿಜೆಪಿ ಕೇಂದ್ರೀಯ ಶಿಸ್ತುಪಾಲನಾ ಸಮಿತಿ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.


ಬಿ.ವೈ.ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಬಿ.ಪಿ. ಹರೀಶ್‌ ಹಾಗೂ ಕಾಂಗ್ರೆಸ್‌ ಒಡನಾಟ ಇರಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಅವರಿಗೆ ಷೋಕಾಸ್‌ ನೋಟಿಸ್‌ ನೀಡಿದ್ದು, 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಸೂಚಿಸಿದ್ದಾರೆ. 

ಕಳೆದ ಫೆ.18 ರಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಎರಡನೇ ಬಾರಿಗೆ ಬಿಜೆಪಿಯ ಕೇಂದ್ರ ಶಿಸ್ತು ಪಾಲನಾ ಸಮಿತಿ ಷೋಕಾಸ್‌ ನೋಟಿಸ್‌ ನೀಡಿತ್ತು. ಎರಡೂ ಬಾರಿಯೂ ಯತ್ನಾಳ್‌ ಉತ್ತರ ನೀಡಿ, ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳ ಕುರಿತು ವರಿಷ್ಠರಿಗೆ ತಿಳಿಸಿದ್ದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದಲ್ಲಿ ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ಬಿ.ಪಿ.ಹರೀಶ್‌, ರಮೇಶ್‌ ಜಾರಕಿಹೊಳಿ ಗುರುತಿಸಿಕೊಂಡಿದ್ದರು. ಈ ನಾಯಕರು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದು, ಪದೇ ಪದೇ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಸಾರ್ವಜನಿಕವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದರು. ಈಗ ಯತ್ನಾಳ್‌ ಬಳಿಕ ಬಿ.ಪಿ. ಹರೀಶ್‌ ಷೋಕಾಸ್‌ ಪಡೆದಿದ್ದಾರೆ.

ಇನ್ನು ಬಿ.ವೈ. ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಪಿ,.ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಇದೇ ಮೊದಲ ಬಾರಿಗೆ ಕೇಂದ್ರ ಶಿಸ್ತುಪಾಲನಾ ಸಮಿತಿ ಷೋಕಾಸ್‌ ನೋಟಿಸ್‌ ನೀಡಿದ್ದು, ಉಭಯ ಬಣಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ. 


ಇದೇ ಮೊದಲ ಬಾರಿಗೆ ಬಂಡಾಯ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರಿಗೂ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಷೋಕಾಸ್‌ ನೋಟಿಸ್‌ ನೀಡಿ, ಉತ್ತರ ಕೋರಿದೆ.

ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರು ಶಾಸಕರಾಗಿ ಆಯ್ಕೆಯಾದಾಗಿನಿಂದ ಪಕ್ಷದ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿದ್ದು, ಕಾಂಗ್ರೆಸ್‌ ನಾಯಕರ ಜೊತೆ ಹೆಚ್ಚು ಒಡನಾಟ ಇರಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವರಿಷ್ಠರ ವಿರುದ್ಧವೇ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಹೈಕಮಾಂಡ್‌ ರೆಬೆಲ್‌ ನಾಯಕರಿಗೆ ಷೋಕಾಸ್‌ ನೋಟಿಸ್‌ ನೀಡಿದೆ.

Tags:    

Similar News