ಶಿರೂರು ಗುಡ್ಡ ಕುಸಿತ: ಮರಣ ಪತ್ರ ನೀಡದ ಆಡಳಿತದ ವಿರುದ್ಧ ಆಕ್ರೋಶ
ಜಗನ್ನಾಥ್, ಲೋಕೇಶ್ ಕುಟುಂಬದವರಿಗೆ ಮರಣ ಪತ್ರವನ್ನೇ ಇನ್ನೂ ನೀಡಲಾಗಿಲ್ಲ. ಹೀಗಾಗಿ ಕುಟುಂಬದವರು ನಮ್ಮವರ ಮರಣ ಪತ್ರ ನೀಡಿ ಅಥವಾ ಕಾರ್ಯಾಚರಣೆ ಮುಂದುವರಿಸಿ ಎಂದು ಪಟ್ಟು ಹಿಡಿದಿದ್ದಾರೆ.;
ಕಳೆದ ಜುಲೈನಲ್ಲಿಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿ ಸಜೀವ ಸಮಾಧಿಯಾಗಿದ್ದರು. ಈ ಘಟನೆ ಸಂಭವಿಸಿ ಐದು ತಿಂಗಳು ಕಳೆದಿದೆ. ಈವರೆಗೆ 9 ಜನರ ಶವಗಳನ್ನು ಹೊರತೆಗೆಯಲಾಗಿದೆ. ಆದರೆ ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಅವರ ಶವ ಇನ್ನೂ ಪತ್ತೆಯಾಗಿಲ್ಲ.
ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮೃತ ಕುಂಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ಜಗನ್ನಾಥ್, ಲೋಕೇಶ್ ಕುಟುಂಬದವರಿಗೆ ಮರಣ ಪತ್ರ ಇನ್ನೂ ನೀಡಲಾಗಿಲ್ಲ. ಹೀಗಾಗಿ ಕುಟುಂಬದವರು ನಮ್ಮವರ ಮರಣ ಪತ್ರ ನೀಡಿ ಅಥವಾ ಕಾರ್ಯಾಚರಣೆ ಮುಂದುವರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಅಂಕೋಲದಲ್ಲಿ ಐಆರ್ಬಿ ಕಂಪನಿ ವಿರುದ್ಧ ದಾಖಲಿಸಿದ ದೂರನ್ನು ಪರಿಗಣಿಸಿ ಎಂದು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದ ಆರೋಪ!
ಎಸ್ಪಿ ಎಂ. ನಾರಾಯಣ್ ಐಆರ್ಬಿ ಕಂಪನಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆಗೆ ಅಂಕೋಲ ಕೋರ್ಟ್ ಆದೇಶಿಸಿದೆ. ಆದರೆ ಈವರೆಗೂ ಯಾಕೆ ಎಸ್ಪಿ ವಿರುದ್ಧ ಕೇಸ್ ದಾಖಲಾಗಿಲ್ಲ ಎಂದು ಈಡಿಗ ಸಮಾಜದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ
ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಜುಲೈನಲ್ಲಿ ಗುಡ್ಡ ಕುಸಿತವಾಗಿತ್ತು. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿನಲ್ಲಿ ಮೇಲೆಯೇ ಗುಡ್ಡು ಕುಸಿದಿರುವುದರಿಂದ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದರು. ಇದೇ ವೇಳೆ ಹೆದ್ದಾರಿ 66 ರ ಪಕ್ಕದಲ್ಲಿ ಕ್ಯಾಂಟೀನ್ ವೊಂದರ ಪಕ್ಕ ಎರಡು ಟ್ಯಾಂಕರ್ ನಿಲ್ಲಿಸಿ ಚಾಲಕರು ಹಾಗೂ ಕ್ಲೀನರ್ ಟೀ ಕುಡಿಯುತ್ತಿದ್ದರು. ಅವರೂ ಸೇರಿದಂತೆ ಕ್ಯಾಂಟೀನಿನ ಮಾಲೀಕ ದಂಪತಿ ಕೂಡ ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿದ್ದರು. ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿ ಹಾಗೂ ಆತನ ಶವ ಗಂಗಾವಳಿ ನದಿಯಲ್ಲಿ 72 ದಿನಗಳ ಬಳಿಕ ಪತ್ತೆಯಾಗಿತ್ತು.
ಗುಡ್ಡ ಕುಸಿತಕ್ಕೆ ಸಂಬಂಧಪಟ್ಟಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಅಧ್ಯಯನ ವರದಿ ಬಂದಿದ್ದು, ಇಡೀ ಗುಡ್ಡವೇ ಕುಸಿದು ಜಾರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಹೇಳಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ನಿರಾಕರಿಸಿತ್ತು. ಇದೊಂದು ನೈಸರ್ಗಿಕ ವಿಕೋಪ ಎಂದು ಪ್ರತಿಪಾದಿಸಿದೆ.