Karnataka By-Election‌ | ಶಿಗ್ಗಾವಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ​ ಘೋಷಣೆ

ಶಿಗ್ಗಾವಿ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್ ಘೋಷಣೆಯಾಗಿದ್ದು, ಸತತ 6ನೇ ಬಾರಿಗೆ ಮುಸ್ಲಿಂ ನಾಯಕ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದೆ;

Update: 2024-10-24 13:15 GMT
ಶಿಗ್ಗಾವಿ ಕ್ಷೇತ್ರಕ್ಕೆ ಯಾಸೀರ್ ಅಹಮದ್‌ಗೆ ಟಿಕೆಟ್ ಘೋಷಣೆ
Click the Play button to listen to article

ಶಿಗ್ಗಾವಿ ಉಪಚುನಾವಣೆಗೆ ಕೊನೆಗೂ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ಮುಸ್ಲಿಂ ಸಮುದಾಯದ ನಾಯಕ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಸತತ 6ನೇ ಬಾರಿಗೆ ಟಿಕೆಟ್ ನೀಡಿದೆ. ಯಾಸೀರ್‌ ಹೆಸರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಗುರುವಾರ ಸಂಜೆ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.  

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ವಿರುದ್ಧ ಯಾಸೀರ್‌ ಅಹಮದ್‌ ಖಾನ್‌ ಪಠಾಣ್‌ ಸ್ಪರ್ಧೆ ನಡೆಸಲಿದ್ದಾರೆ. ಮುಸ್ಲಿಂ ಮತಗಳು ಕೂಡ ನಿರ್ಣಾಯಕವಾಗಿರುವ ಲೆಕ್ಕಾಚಾರದಲ್ಲಿ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಶಿಗ್ಗಾವಿ ಕ್ಷೇತ್ರಕ್ಕೆ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿ ಕುಲಕರ್ಣಿ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಲಿದೆ ಎಂಬ ಮಾತು ಕೇಳಿ ಬಂದಿತ್ತು.  

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕ ಮತಗಳಾಗಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಮುಸ್ಲಿಂ ನಾಯಕನಿಗೆ ಮಣೆ ಹಾಕಲಾಗಿದೆ ಎನ್ನಲಾಗಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಠಾಣ್‌ ಕಣಕ್ಕಿಳಿದಿದ್ದರು. ಆದರೆ, ಬೊಮ್ಮಾಯಿ ವಿರುದ್ಧ ಸೋಲು ಕಂಡಿದ್ದರು.

Tags:    

Similar News