ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್ ಸಂಸದ ಸೆಂಥಿಲ್ ಮಾನನಷ್ಟ ಮೊಕದ್ದಮೆ

ಶನಿವಾರ ಬೆಳಿಗ್ಗೆ ಸೆಂಥಿಲ್ ತಮ್ಮ ವಕೀಲರ ಮುಖಾಂತರ ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಗೆ ಸಂಬಂಧಿಸಿದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.;

Update: 2025-09-06 09:22 GMT

ಧರ್ಮಸ್ಥಳ ಪಿತೂರಿ ಆರೋಪಕ್ಕೆ ಸೆಂಥಿಲ್ ಕಾನೂನು ಹಾದಿ ಹಿಡಿದಿದ್ದಾರೆ. 

"ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದಿನ ರೂವಾರಿ" ಎಂದು ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ಕಾಂಗ್ರೆಸ್ ಸಂಸದ ಶಶಿಕಾಂತ ಸೆಂಥಿಲ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಶನಿವಾರ ಬೆಳಿಗ್ಗೆ, ಸೆಂಥಿಲ್ ಅವರು ತಮ್ಮ ವಕೀಲರೊಂದಿಗೆ ಬೆಂಗಳೂರಿನ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿ ದೂರು ಸಲ್ಲಿಸಿದರು. ದೂರನ್ನು ಸ್ವೀಕರಿಸಿದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು, ಸೆಪ್ಟೆಂಬರ್ 11ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

ಸೆಂಥಿಲ್ ಹೇಳಿದ್ದೇನು?

ದೂರು ದಾಖಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಂಥಿಲ್, "ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ಪ್ರತಿದಿನವೂ ನನ್ನ ಹೆಸರನ್ನು ಈ ಅಸತ್ಯ ಪ್ರಕರಣದಲ್ಲಿ ಎಳೆದು ತರುತ್ತಿದ್ದಾರೆ. ನಾನು ಬಲಪಂಥೀಯ ಚಟುವಟಿಕೆಗಳ ವಿರುದ್ಧ ದೃಢವಾಗಿ ನಿಂತಿರುವುದೇ ಇದಕ್ಕೆ ಕಾರಣ. ಇದರ ಹಿಂದೆ ಸ್ಪಷ್ಟವಾದ ರಾಜಕೀಯ ಉದ್ದೇಶವಿದೆ," ಎಂದು ಆರೋಪಿಸಿದ್ದಾರೆ.

"ಜನಾರ್ದನ ರೆಡ್ಡಿ ಗಣಿ ಹಗರಣದಿಂದ ಕಳಂಕಿತರಾದವರು. ನ್ಯಾಯಮೂರ್ತಿಗಳಿಗೇ ಗೌರವ ಕೊಡದ ವ್ಯಕ್ತಿ ಅವರು. ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ, ಯಾರೇ ಆಗಿರಲಿ, ಅವರ ವಿರುದ್ಧ ಖಂಡಿತವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇನೆ," ಎಂದು ಅವರು ಎಚ್ಚರಿಕೆ ನೀಡಿದರು

ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯೆ

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ನನಗೆ ದೆಹಲಿಯಲ್ಲಿ ಮನೆ ಇಲ್ಲ, ನಾನು ಇನ್ನೂ ತಮಿಳುನಾಡು ಭವನದಲ್ಲೇ ವಾಸಿಸುತ್ತಿದ್ದೇನೆ. ಕೆಲವರು ನನ್ನನ್ನು ಕ್ರಿಶ್ಚಿಯನ್ ಎಂದು ಪ್ರಚಾರ ಮಾಡುತ್ತಿದ್ದಾರೆ, ಆದರೆ 'ಸೆಂಥಿಲ್' ಎಂಬುದು ಸುಬ್ರಹ್ಮಣ್ಯ ದೇವರ ಮತ್ತೊಂದು ಹೆಸರು ಎಂಬುದು ಅವರಿಗೆ ತಿಳಿದಿಲ್ಲ," ಎಂದು ಸ್ಪಷ್ಟಪಡಿಸಿದರು.

Tags:    

Similar News