ಏಳನೇ ವೇತನ ಆಯೋಗ | ಶೇ.27.5 ರಷ್ಟು ಮೂಲ ವೇತನ ಹೆಚ್ಚಳ ಶಿಫಾರಸು

ಏಳನೇ ವೇತನ ಆಯೋಗ ಬಹುನಿರೀಕ್ಷಿತ ತನ್ನ ವರದಿಯನ್ನು ಶನಿವಾರ(ಮಾ. 16) ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ವರದಿಯಲ್ಲಿ ಕನಿಷ್ಠ ಮೂಲ ವೇತನವನ್ನು 17,000 ರೂ.ಗಳಿಂದ 27 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ;

Update: 2024-03-16 07:24 GMT

ಬೆಂಗಳೂರು: ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಕೆಲವೇ ಗಂಟೆಗಳ ಮುನ್ನ ರಾಜ್ಯದ ಏಳನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.

ಶನಿವಾರ (ಮಾ. 16) ವರದಿ ಸಲ್ಲಿಸಿದ್ದು, ಮೂಲ ವೇತನದ ಶೇ.27.5ರಷ್ಟು ಹೆಚ್ಚಳ ಮಾಡಲು ಆಯೋಗವು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದೆ.

ಏಳನೇ ವೇತನ ಆಯೋಗದ ವರದಿ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, “ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ನಿನ್ನೆ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಇಂದು ವರದಿಯನ್ನು ಸ್ವೀಕರಿಸಲಾಗಿದೆ. ವರದಿಯಲ್ಲಿ ಕನಿಷ್ಠ ಮೂಲ ವೇತನವನ್ನು 17,000 ರೂ.ಗಳಿಂದ 27 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ವರದಿಯಲ್ಲಿ ಇನ್ನೂ ಅನೇಕ ಶಿಫಾರಸುಗಳಿದೆ, ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಅಧ್ಯಯನ ಮಾಡಿದ ಬಳಿಕ ನೀಡುವ ಸಲಹೆಗಳ ಆಧಾರದಲ್ಲಿ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನೀತಿ ಸಂಹಿತೆ ಜಾರಿಗೆ ಮುನ್ನ ವರದಿ ಜಾರಿಗೊಳಿಸಿ: ಆಯನೂರು ಮಂಜುನಾಥ್

ಮಾ. 16 ರಂದು ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಾಗಲಿದ್ದು, ಅದಕ್ಕೂ ಮುನ್ನ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದ್ದರು.

ನೀತಿ ಸಂಹಿತೆ ಜಾರಿಯಾದ ಬಳಿಕ ವರದಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ತಕ್ಷಣವೇ ವರದಿಯನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದರಾದರೂ, ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಲಿರುವುದರಿಂದ ಈ ಚುನಾವಣೆಗೂ ಮುನ್ನ ಏಳನೇ ವೇತನ ಆಯೋಗದ ವರದಿಯ ಶಿಫಾರಸುಗಳು ಜಾರಿಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ.

ಸರ್ಕಾರಿ ನೌಕರರಿಂದ ನಿರೀಕ್ಷೆ

ಏಳನೇ ವೇತನ ಆಯೋಗದ ವರದಿ ಸಲ್ಲಿಕೆಗೂ ಮುನ್ನ ಪ್ರತಿಕ್ರಿಯಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು. 

ವರದಿ ಸ್ವೀಕರಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ಷಡಕ್ಷರಿ, "ಸರ್ಕಾರ ವರದಿ ಸ್ವೀಕಾರ ಮಾಡಿರುವುದಕ್ಕೆ ಖುಷಿ ಇದೆ. ಈ ಹಿಂದೆ ಸಿದ್ದರಾಮಯ್ಯ ನವರು 30% ಕೊಟ್ಟಿದ್ದರು. ಈಗ ಸರ್ಕಾರಕ್ಕೆ 27.50% ವೇತನ ಹೆಚ್ಚಳಕ್ಕೆ ಆಯೋಗ ವರದಿ ಕೊಟ್ಟಿದೆ. ಮತ್ತಷ್ಟು ಹೆಚ್ಚಳ ಮಾಡಲು ಮನವಿ ಮಾಡುತ್ತೇವೆ. ಸರ್ಕಾರ ಕೂಡಲೇ ವರದಿ ಜಾರಿಗೊಳಿಸಬೇಕು. ಇದರಿಂದ 12 ಲಕ್ಷ ಸರ್ಕಾರಿ ನೌಕಕರಿಗೆ ಸಹಕಾರ ಆಗಲಿದೆ. ನಿವೃತ್ತ ನೌಕಕರ ಕುಟುಂಬಗಳಿಗೂ ಸಹಾಯ ಆಗಲಿದೆ ಎಂದರು.

Tags:    

Similar News