Separate Malnad State | ಸಚಿವರೊಂದಿಗೆ ಮಾತುಕತೆ ವಿಫಲ: ರೈತರನ್ನು ವಶಕ್ಕೆ ಪಡೆದ ಪೊಲೀಸರು

Update: 2024-10-25 13:52 GMT

ಭೂ ಹಕ್ಕಿಗಾಗಿ ಒತ್ತಾಯಿಸಿ ಮಲೆನಾಡು ರೈತರು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆ, ಶುಕ್ರವಾರ ಕಾರ್ಗಲ್ ಪಟ್ಟಣಕ್ಕೆ ತಲುಪಿದ ಬಳಿಕ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ.

ತಾಳಗುಪ್ಪಾ ಪಟ್ಟಣದಿಂದ ಬೆಳಿಗ್ಗೆ ಪಾದಯಾತ್ರೆ ಮುಂದುವರಿಸಿದ್ದ ರೈತರು ಮಧ್ಯಾಹ್ನ ಹೊತ್ತಿಗೆ ಕಾರ್ಗಲ್ ಪಟ್ಟಣಕ್ಕೆ ತಲುಪಿದ್ದರು. ಆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸ್ಥಳಕ್ಕೆ ಆಗಮಿಸಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ಶರಾವತಿ ಸಂತ್ರಸ್ತರ ಭೂ ಮಂಜೂರಾತಿ, ಕೆಪಿಸಿ ಭೂಮಿ ಮಂಜೂರಾತಿ, ಅರಣ್ಯ ಹಕ್ಕು ಅರ್ಜಿಗಳ ವಿಲೇವಾರಿ ಹಾಗೂ ಬಗರ್ಹುಕಂ ಸಾಗುವಳಿ ಹಕ್ಕುಪತ್ರ ನೀಡುವ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ ಮಾತನ್ನು ಉಳಿಸಿಕೊಳ್ಳಲಿದೆ. ಈ ವಿಷಯದಲ್ಲಿ ನಾನು ನಿಮ್ಮ ಪರವಿದ್ದೇನೆ, ಪಾದಯಾತ್ರೆಯನ್ನು ಕೈಬಿಡಿ ಎಂದು ಸಚಿವರು ರೈತ ಮುಖಂಡರಿಗೆ ಮನವಿ ಮಾಡಿದರು.

ಆದರೆ, ರೈತ ಮುಖಂಡರು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅರಣ್ಯ ಭೂಮಿ ಮತ್ತು ಸರ್ಕಾರಿ ಭೂಮಿ ತೆರವು ನೆಪದಲ್ಲಿ ಮಲೆನಾಡಿನ ವಿವಿಧ ಯೋಜನಾ ಸಂತ್ರಸ್ತ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯ ವಿವಿಧ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ ಸರ್ಕಾರದ ರೈತ ವಿರೋಧಿ, ಸಂತ್ರಸ್ತರ ವಿರೋಧಿ ನೀತಿಯನ್ನು ಖಂಡಿಸಿ, ವಾಗ್ವಾದ ನಡೆಸಿದರು.

ಸರಣಿ ಜಲಾಶಯಗಳಿಂದ ಸಂತ್ರಸ್ತರಾದ ರೈತರಿಗೆ ಸರ್ಕಾರ ದಶಕಗಳಿಂದ ಅನ್ಯಾಯ ಎಸಗುತ್ತಲೇ ಬಂದಿದೆ. ಅವರ ವಿಷಯದಲ್ಲಿ ಸರ್ಕಾರ ಅಮಾನವೀಯವಾಗಿ ವರ್ತಿಸುತ್ತಿದೆ. ಸರ್ಕಾರದ ಧೋರಣೆ ಹೀಗೆಯೇ ಮುಂದುವರಿದರೆ ನಾವು ಸಂವಿಧಾನದ ಶೆಡ್ಯೂಲ್ 6ರ ಅಡಿಯಲ್ಲಿ ಮಣಿಪುರ, ಮಿಜೋರಾಂಗೆ ನೀಡಿರುವ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಹೋರಾಡುವುದು ಅನಿವಾರ್ಯವಾಗಲಿದೆ ಎಂದು ರೈತ ಮುಖಂಡರು ಸಚಿವರಿಗೆ ಎಚ್ಚರಿಕೆ ನೀಡಿದರು.

ಮಲೆನಾಡಿನ ಯೋಜನಾ ಸಂತ್ರಸ್ತ ಬಡ ರೈತರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣಲಾಗುತ್ತಿದೆ. ಅರಣ್ಯ ಸಚಿವರು ಮೂರು ಎಕರೆಯೊಳಗಿನ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಕುಳಿತು ಹೇಳಿಕೆ ನೀಡುತ್ತಾರೆ. ಆದರೆ ಮತ್ತೊಂದು ಕಡೆ ತಮ್ಮ ಅಧಿಕಾರಿಗಳನ್ನು ಒಂದು, ಅರ್ಧ ಎಕರೆ ಒತ್ತುವರಿದಾರರ ಮೇಲೆ ಛೂ ಬಿಡುತ್ತಿದ್ದಾರೆ. ಹಾಗಾಗಿ ಹತ್ತು ಸಾವಿರಕ್ಕೂ ಹೆಚ್ಚು ರೈತರನ್ನು ಒಕ್ಕಲೆಬ್ಬಿಸಲು ಈಗಾಗಲೇ ನೋಟಿಸ್ ನೀಡಲಾಗುತ್ತಿದೆ. ಇದು ಯಾವ ನ್ಯಾಯ. ಸರ್ಕಾರ ಇಂತಹದ್ದೇ ಮೋಸದಾಟಗಳನ್ನು ಮುಂದುವರಿಸಿದರೆ ನಾವು ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸುತ್ತೇವೆ ಎಂದು ಹೋರಾಟಗಾರರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರು ಹೋರಾಟ ಕೈಬಿಡುವಂತೆ ಮಾಡಿದ ಮನವಿಯಲ್ಲಿ ರೈತರು ತಿರಸ್ಕರಿಸಿ, ನೀವು ಬಾಯಿ ಮಾತಿನ ಭರವಸೆ ನೀಡುವುದನ್ನು ನಾವು ನಂಬುವುದಿಲ್ಲ. ಏಕೆಂದರೆ ಎಂಟು ದಶಕಗಳಿಂದ ಸರ್ಕಾರಗಳು, ಸಚಿವರ ಇಂತಹ ಮಾತುಗಳನ್ನು ಕೇಳಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ನಿಮ್ಮದೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನಿಮ್ಮ ಎದುರಲ್ಲೇ ಹೇಳಿದ್ದ ಮಾತುಗಳನ್ನು ನೀವು ಮರೆತಿರಬಹುದು, ನಾವು ಮರೆತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಚಿವರೊಂದಿಗೆ ಮಾತುಕತೆಯಲ್ಲಿ ಹೋರಾಟದ ನೇತೃತ್ವ ವಹಿಸಿರುವ ತೀ ನಾ ಶ್ರೀನಿವಾಸ್, ದಿನೇಶ್ ಶಿರವಾಳ, ಜಿ ಟಿ ಸತ್ಯನಾರಾಯಣ ತುಮರಿ, ಶ್ರೀಕರ್‌, ಮಲ್ಲಿಕಾರ್ಜುನ ಹಕ್ರೆ ಭಾಗವಹಿಸಿದ್ದರು.

ಸಚಿವರೊಂದಿಗಿನ ಮಾತುಕತೆ ಮುರಿದುಬಿದ್ದ ಬಳಿಕ ಪಾದಯಾತ್ರೆ ಮುಂದುವರಿಸುವ ತಯಾರಿಯಲ್ಲಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು, ಸಾಗರ ಪಟ್ಟಣಕ್ಕೆ ಕರೆತಂದು ಸಂಜೆ ಬಿಡುಗಡೆ ಮಾಡಿದ್ದಾರೆ.

Tags:    

Similar News