ಬಸವ ಜಯಂತಿ | ಅನುಭವ ಮಂಟಪ ಮಾದರಿಯಲ್ಲಿ ಸರ್ಕಾರದಿಂದ 'ಸರ್ವ ಧರ್ಮ ಸಂಸತ್'
ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವಶಿವರಾಜ ತಂಗಡಗಿ, "ಸಮಾನತೆಯ ಸಂದೇಶ ಸಾರಲು ಸರ್ಕಾರದ ವತಿಯಿಂದ ಸರ್ವಧರ್ಮ ಸಂಸತ್ತು ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ," ಎಂದು ಹೇಳಿದ್ದಾರೆ.;

12ನೇ ಶತಮಾನದಲ್ಲಿ ಸಮಾಜದಲ್ಲಿನ ಕಂದಾಚಾರ, ಜಾತಿ ವ್ಯವಸ್ಥೆ, ಮೇಲುಕೀಳು ಭಾವನೆ ಹೊಡೆದೋಡಿಸಲು ದಾರ್ಶನಿಕ ಬಸವಣ್ಣನವರ ನೇತೃತ್ವದಲ್ಲಿ ಆರಂಭವಾಗಿದ್ದ ಸಾಮಾಜಿಕ ಕ್ರಾಂತಿಯ ಫಲವಾಗಿ ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ʼಅನುಭವ ಮಂಟಪʼದ ಮಾದರಿಯಲ್ಲಿ ಸಮಾನತೆ ಹಾಗೂ ಸೌಹಾರ್ದತೆಯ ಸಂದೇಶ ಸಾರಲು ರಾಜ್ಯ ಸರ್ಕಾರ ʼಸರ್ವಧರ್ಮ ಸಂಸತ್ತುʼ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಸವಣ್ಣನವರ ಸಮಾನತೆ ಸಾರುವ ಅನುಭವ ಮಂಟಪವನ್ನು ಮಾದರಿಯಾಗಿಟ್ಟುಕೊಂಡು ಬುದ್ಧ ಬಸವ ಅಂಬೇಡ್ಕರ್ ತತ್ವದಡಿ ಏಪ್ರಿಲ್ 30 ರಂದು ಬರುವ ಬಸವ ಜಯಂತಿಯಂದು ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ ʼಸರ್ವ ಧರ್ಮ ಸಂಸತ್ತುʼ ನಡೆಸಲು ʼ ತೀರ್ಮಾನಿಸಿದೆ.
12ನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಸೇರುತ್ತಿದ್ದ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತು. ಇದರಲ್ಲಿ ಎಲ್ಲಾ ಜಾತಿಯ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಹಾಗೂ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಆ ಮಾದರಿಯನ್ನು ಅನುಸರಿಸಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಬಸವ ಜಯಂತಿ ನಿಮಿತ್ತ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲು ಆಯೋಜಿಸಲಾಗಿತ್ತು. ನಿಗಮದ ಈ ಕಾರ್ಯಕ್ರಮದ ಉದ್ದೇಶವರಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸರ್ಕಾರದ ವತಿಯಿಂದಲೇ ದೊಡ್ಡ ಪ್ರಮಾಣದಲ್ಲಿ ʼಸರ್ವ ಧರ್ಮ ಸಂಸತ್ತುʼ ಏರ್ಪಡಿಸಲು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಎರಡು ದಿನ ಕಾರ್ಯಕ್ರಮ ಮಾಡಲು ಯೋಜಿಸಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ
ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ 2022 ರಲ್ಲಿ ಸರ್ವಧರ್ಮ ಸಂಸತ್ ಕಾರ್ಯಕ್ರಮವನ್ನು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಆದರೆ, ಈ ಬಾರಿ ಸರ್ಕಾರವೇ ಅಧಿಕೃತವಾಗಿ ಸರ್ವಧರ್ಮ ಸಂಸತ್ ನಡೆಸಲು ಉದ್ದೇಶಿಸಿದೆ.
ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರು ಕಾರ್ಯಕ್ರಮದ ಆಯೋಜನೆ ಮತ್ತು ಪೂರ್ವ ಸಿದ್ಧತೆ ಕೈಗೊಳ್ಳಲು ತಮ್ಮ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿದ್ದು. ಆ ಸಮಿತಿ ಕಾರ್ಯಕ್ರಮದ ರೂಪು ರೇಷೆ ಕುರಿತು ಚರ್ಚಿಸಲು ಏಪ್ರಿಲ್ 2 ರಂದು ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಿವ ಶಿವರಾಜ ತಂಗಡಗಿ, "ಬಸವ, ಅಂಬೇಡ್ಕರ್ ತತ್ವದ ಅಡಿಯಲ್ಲಿ ಸಮಾನತೆಯ ಸಂದೇಶ ಸಾರಲು ಸರ್ಕಾರದ ವತಿಯಿಂದ ಸರ್ವಧರ್ಮ ಸಂಸತ್ತು ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಈ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶೀಘ್ರವೇ ಸಮಿತಿ ಸಭೆ ನಡೆಸಿ ಕಾರ್ಯಕ್ರಮದ ರೂಪು ರೇಷೆ ಕುರಿತು ಚರ್ಚಿಸಲಾಗುವುದು," ಎಂದು ಹೇಳಿದ್ದಾರೆ.
ಸರ್ವಧರ್ಮ ಸಂಸತ್ ಉದ್ದೇಶ
ಸರ್ವ ಧರ್ಮ ಸಂಸತ್ತಿನ ನೇತೃತ್ವ ಯಾರು ವಹಿಸಬೇಕು ಹಾಗೂ ಯಾರನ್ನು ಸರ್ವಧರ್ಮ ಸಂಸತ್ತಿನ ಸಭೆಗೆ ಆಹ್ವಾನ ನೀಡಬೇಕು ಎನ್ನುವ ಕುರಿತು ಇನ್ನೂ ಅಧಿಕೃತ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದ್ದು, ಆ ಹಿನ್ನೆಲೆಯಲ್ಲಿ ಸಚಿವರ ನೇತೃತ್ವದ ಸಮಿತಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ.
ಪ್ರಸ್ತುತ ಸಮಾಜದಲ್ಲಿ ಧರ್ಮಧರ್ಮಗಳ ನಡುವೆ ಅಪನಂಬಿಕೆ, ಅಂತರ, ದ್ವೇಷ ಹೆಚ್ಚಾಗುತ್ತಿದ್ದು, ಅಂತಹ ಮನೋಭಾವನೆಯನ್ನು ತೊಡೆದುಹಾಕಲು ಬಸವಾದಿ ಶರಣರು ನಡೆದ ಮಾರ್ಗ, ವಚನಗಳ ಮೂಲಕ ಅವರು ನೀಡಿರುವ ಸಂದೇಶಗಳ ಸಾರವನ್ನು ಸಮಾಜಕ್ಕೆ ತಲುಪಿಸುವ ಮೂಲಕ ದ್ವೇಷ, ಅಪನಂಬಿಕೆ ಮುಕ್ತ, ಹಾಗೂ ಸಾಮರಸ್ಯ ಹಾಗೂ ಸಹೋದರತ್ವ ಸಂದೇಶ ಸಾರುವುದು ಈ ಸರ್ವ ಧರ್ಮ ಸಂಸತ್ತಿನ ಉದ್ದೇಶವಾಗಿದೆ ಎನ್ನಲಾಗಿದೆ.
"ವಿಶ್ವಗುರು ಬಸವಣ್ಣನವರ ಜಯಂತಿ ಹಿನ್ನೆಲೆಯಲ್ಲಿ ಅವರ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ ಪ್ರಥಮ ಬಾರಿಗೆ ಸರ್ವ ಧರ್ಮ ಸಂಸತ್ತು ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ. ಬಸವ ವೈಭವ ಅಥವಾ ಬಸವ ಉತ್ಸವ ಎಂದು ಪ್ರತಿ ವರ್ಷ ಈ ಕಾರ್ಯಕ್ರಮ ಮಾಡಬೇಕೆನ್ನುವುದು ಉದ್ದೇಶವಾಗಿದೆ. ಎರಡು ದಿನ ಕಾರ್ಯಕ್ರಮ ನಡೆಯಲಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ," ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.