ಹೈಕೋರ್ಟಿನಲ್ಲಿ ಐತಿಹಾಸಿಕ ಕ್ಷಣ | ಶ್ರವಣದೋಷ ಮೆಟ್ಟಿನಿಂತು ವಾದ ಮಂಡಿಸಿದ ವಕೀಲೆ ಸಾರಾ ಸನ್ನಿ
ಇದೇ ಮೊದಲ ಬಾರಿಗೆ ಶ್ರವಣದೋಷವುಳ್ಳ ವಕೀಲೆಯೊಬ್ಬರು ಕೌಟುಂಬಿಕ ವ್ಯಾಜ್ಯ ಪ್ರಕರಣದಲ್ಲಿ ವಾದ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.;
ಬೆಂಗಳೂರು: ರಾಜ್ಯದ ಹೈಕೋರ್ಟ್ ಇದೇ ಮೊದಲ ಬಾರಿಗೆ ಶ್ರವಣದೋಷವುಳ್ಳ ವಕೀಲೆಯೊಬ್ಬರು ವಾದ ಮಂಡಿಸುವ ಅಪರೂಪದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಕೌಟುಂಬಿಕ ಪ್ರಕರಣವೊಂದರಲ್ಲಿ ಪತಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಅವರು ನೊಂದ ಮಹಿಳೆಯ ಪರ ವಾದ ಮಂಡಿಸಿದರು. ಅಲ್ಲದೆ, ದೈಹಿಕ ನ್ಯೂನತೆಯನ್ನು ಮೀರಿ ವಾದಿಸಿದ ಸಾರಾ ಪ್ರಯತ್ನಕ್ಕೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತು.
ವಿಚಾರಣೆ ಪೂರ್ಣಗೊಂಡ ಬಳಿಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, "ಈ ಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪೀಠದ ಮುಂದೆ ಸಾರಾ ವಾದ ಮಂಡಿಸಿದ್ದರು. ಕರ್ನಾಟಕ ಹೈಕೋರ್ಟ್ ಸಾರಾಗೆ ವಾದಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಶ್ರವಣ ದೋಷವುಳ್ಳ ವಕೀಲರಿಗೆ ವಾದಿಸಲು ಅವಕಾಶ ಕಲ್ಪಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಕೀರ್ತಿಗೆ ಪಾತ್ರವಾಗಿದೆ" ಎಂದು ನ್ಯಾಯಾಲಯ ಮತ್ತು ದಿಟ್ಟ ವಕೀಲೆ ಸಾರಾ ಸನ್ನಿ ಅವರನ್ನು ಅಭಿನಂದಿಸಿದರು.
ಎಲ್ಲರಿಗೂ ಧನ್ಯವಾದ ಸಲ್ಲಿಸಿದ ನ್ಯಾಯಮೂರ್ತಿ ನ್ಯಾ.ನಾಗಪ್ರಸನ್ನ ಅವರು ಪ್ರಕರಣದ ವಿಚಾರಣೆಯನ್ನು ಏ.19ಕ್ಕೆ ಮುಂದೂಡಿದರು.
ಯಾವ ಪ್ರಕರಣ?
ಸ್ಕಾಟ್ಲೆಂಡ್ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯದ ಭಾಗವಾಗಿ ಪತಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದಲ್ಲಿ ಪತ್ನಿಯ ಪರವಾಗಿ ಸಾರಾ ಸನ್ನಿ ವಾದ ಮಂಡಿಸಲು ಕೋರಿ ಗುರುವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರಕರಣದ ಪ್ರತಿವಾದಿಗಳಾದ ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಮತ್ತು ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಒಪ್ಪಿಗೆ ಸೂಚಿಸಿದ್ದರು.
ಪೀಠವು ಸಾರಾ ಸನ್ನಿ ಅವರಿಗೆ ದುಭಾಷಿ ನೆರವು ನೀಡಲು ವ್ಯವಸ್ಥೆ ಕಲ್ಪಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಏ.8ಕ್ಕೆ ನಿಗದಿಗೊಳಿಸಿತ್ತು.
ಪ್ರಕರಣದ ಹಿನ್ನೆಲೆ
ಮುಂಬೈನ ಥಾಣೆ ಜಿಲ್ಲೆಯ ಪತಿ 2004ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಟ್ಲೆಂಡ್ಗೆ ತೆರಳಿದ್ದರು. ಸದ್ಯ ಅವರು ಅಲ್ಲಿಯೇ ಬ್ಯಾಂಕ್ ಅಧಿಕಾರಿಯಾಗಿದ್ದು ಬ್ರಿಟಿಷ್ ಪೌರತ್ವ ಪಡೆದಿದ್ದಾರೆ. ಅವರಿಗೆ ಈಗ 41 ವರ್ಷ ವಯಸ್ಸಾಗಿದ್ದು, ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಅವರು ಆನ್ಲೈನ್ ತಾಣದ ಮೂಲಕ ಬೆಂಗಳೂರಿನ 36 ವರ್ಷದ ಮಹಿಳೆಯನ್ನು 2023ರ ಮೇ 21ರಂದು ವಿವಾಹವಾಗಿದ್ದರು.
ʻʻನನ್ನ ಪತಿಗೆ ಬಂದ ಮೊಬೈಲ್ ಸಂದೇಶವನ್ನು ಓದಿದೆ. ಅದರಲ್ಲಿ ಬೇರೆ ಮಹಿಳೆಯ ಜೊತೆ ನನ್ನ ಪತಿ ಅತ್ಯಂತ ಪ್ರೀತಿ ಮತ್ತು ಲೈಂಗಿಕ ಸಲುಗೆಯನ್ನು ಹೊಂದಿರುವುದು ನನ್ನ ಅರಿವಿಗೆ ಬಂದಿದೆʼʼ ಎಂದು ಪತ್ನಿ ದೂರಿದ್ದಾರೆ.
ನಂತರ ಇಬ್ಬರ ನಡುವೆ ಮಾತಿನ ಸಂಘರ್ಷ ನಡೆದಿತ್ತು. ಆ ವೇಳೆ ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅವರೊಬ್ಬ ಪೀಡಕ ಮನೋವೃತ್ತಿಯ ಕುಡುಕ, ವರದಕ್ಷಿಣೆಗಾಗಿ ಸತಾಯಿಸಿದ್ದಾರೆಂದು ಆರೋಪಿಸಿ ಪತ್ನಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪತಿ, ಅವರ ತಂದೆ, ತಾಯಿ, ಅವರ ತಂಗಿ ಹಾಗೂ ಆಕೆಯ ಗಂಡನ ವಿರುದ್ಧ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಯಾರು ಸಾರಾ ಸನ್ನಿ?
ಸಾರಾ ಸನ್ನಿ ಹುಟ್ಟೂರು ಕೇರಳದ ಕೊಟ್ಟಾಯಂ, ಅವರೆ ತಂದೆ ಕೇರಳದ ಕುರುವಿಲ್ಲಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್, ತಾಯಿ ಗೃಹಿಣಿ ಈ ದಂಪತಿಯ ಮಗನಿಗೂ ಕೂಡ ಕಿವಿ ಕೇಳಿಸುವುದಿಲ್ಲ, ಎಂಟು ವರ್ಷಗಳ ನಂತರ ಅವಳಿ ಹೆಣ್ಣುಮಕ್ಕಳಲ್ಲಿ ಒಬ್ಬರಾದ ಸಾರಾ ಅವರಿಗೂ ಶ್ರವಣದೋಷವಿತ್ತು. ತಮ್ಮ ಕಠಿಣ ಶ್ರಮದಿಂದ ಕಾನೂನು ಪದವಿ ಪಡೆದ ಸಾರಾ ಅವರು ಹಿರಿಯ ವಕೀಲರಾದ ಸಂಚಿತಾ ಬಳಿ ಸುಪ್ರೀಂಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಲಾದಲ್ಲಿ ಬ್ಯಾಚುಲರ್ ಆಫ್ ಲಾ (LLB) ಪದವಿ ಪಡೆದು ಕಾನೂನು ಮತ್ತು ನೀತಿ ಸಂಶೋಧನಾ ಕೇಂದ್ರ ಮತ್ತು ಬೆಂಗಳೂರಿನ ಖ್ಯಾತ ವಕೀಲರ ಬಳಿ ಕಾನೂನು ಕಲಿಕೆ ಮಾಡಿದ್ದರು. ಸಾರಾ ತನ್ನ ಕಾನೂನು ಅಧ್ಯಯನವನ್ನು ಪ್ರಾರಂಭಿಸುವ ಮೊದಲು 2017 ರಲ್ಲಿ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ (ಬಿಕಾಂ) ಪದವಿ ಪಡೆದಿದ್ದರು ಮತ್ತು ಮಾರ್ಕೆಟಿಂಗ್, ಅಕೌಂಟಿಂಗ್ ಮತ್ತು ವ್ಯವಹಾರ ಸಂಬಂಧಿತ ಕಾನೂನು ವಿಚಾರದಲ್ಲಿ ಪರಿಣತಿ ಪಡೆದಿದ್ದಾರೆ. ಈಗ ಶ್ರವಣ ದೋಷವುಳ್ಳ ಕಕ್ಷಿದಾರರಿಗೆ ಭರವಸೆಯ ಬೆಳಕಾಗಿದ್ದಾರೆ ಸಾರಾ ಸನ್ನಿ.
ಸನ್ನಿಯವರು 2023ರಲ್ಲಿ ಸಂಕೇತ ಭಾಷೆ ಬಳಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಮಂಡಿಸಿದ್ದರು. ಅಂದು ಸಂಕೇತ ಭಾಷೆ ಮೂಲ ವಾದಿಸಿದ ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಅವರು ಕ್ಲಪ್ತ ಕಾಲದಲ್ಲಿ ನ್ಯಾಯಾಲಯ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದು ಮತ್ತು ಸೈನ್ ಲಾಂಗ್ವೇಜ್ ಇಂಟರ್‌ಪ್ರಿಟರ್ (ಸಂಕೇತ ಭಾ಼ಷಾ ವಿವರಣೆಕಾರ)ನನ್ನು ಬಳಸಿಕೊಂಡು ತಮ್ಮ ಕಕ್ಷಿದಾರರರನ್ನು ಪ್ರತಿಧಿನಿಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.