Bangalore Stampede: ಕಾಲ್ತುಳಿತ ದುರಂತ: ಅತ್ತ ಡಿಕೆಶಿ ಕಣ್ಣೀರು; ಡಿಸಿಎಂ ರಾಕ್ಷಸ ಎಂದ ಕುಮಾರಸ್ವಾಮಿ

ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸಿಎಂ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ಮಾನವೀಯ ಗುಣಗಳಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.;

Update: 2025-06-05 13:08 GMT

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌

ರಾಜಕೀಯ ಬದ್ಧ ವಿರೋಧಿಗಳಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು "ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ದುರಂತʼ ದ ಸಂಬಂಧ ಪರಸ್ಪರ ಟೀಕಿಸಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ಘಟನೆ ಸಂಬಂಧ ಮಾಧ್ಯಮದ ಮುಂದೆ ಕಣ್ಣೀರು ಹಾಕಿ, "ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಹೇಳಿಕೊಂಡಿದ್ದರು. ಹಾಗೂ "ಹೆಣದ ಮೇಲೆ ರಾಜಕೀಯ ಮಾಡುವುದೇ ಕುಮಾರಸ್ವಾಮಿ, ಬಿಜೆಪಿ ನಾಯಕರ ವೃತ್ತಿ," ಎಂದು ಟೀಕಿಸಿದ್ದರು.

“18 ವರ್ಷಗಳ ಕಾಲ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಲ್ಲಿ ಸಂತೋಷ ಕಟ್ಟೆಯೊಡೆದಿತ್ತು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದರು ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ನಿನ್ನೆ ಆಸ್ಪತ್ರೆಯಲ್ಲಿ ಮೃತರ ಪೋಷಕರು ಮರಣೋತ್ತರ ಪರೀಕ್ಷೆ ಮಾಡಬೇಡಿ. ನಮ್ಮ ಮಗುವಿನ ಮೃತದೇಹ ನಮಗೆ ಕೊಡಿ ಎಂದು ಅಂಗಲಾಚಿದರು. ನಾವು ಆ ರೀತಿ ಪರೀಕ್ಷೆ ಮಾಡದೇ ಮೃತದೇಹವನ್ನು ಹಸ್ತಾಂತರ ಮಾಡಲು ಹೇಗೆ ಸಾಧ್ಯ? ಇದರಿಂದ ನಾಳೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಈ ಸಾವು ಯಾವ ಕಾರಣಕ್ಕೆ ಆಗಿದೆ ಎಂಬ ವೈಜ್ಞಾನಿಕ ವರದಿ ಬೇಕು” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ದಾದಾಗಿರಿಯ ಶೋ

ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣವಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕಾಲ್ತುಳಿತ ದುರಂತದ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಿಸಿಎಂ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ. ಮುಖ್ಯಮಂತ್ರಿಗೆ ಧೈರ್ಯವಿದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.

"ತನಗೆ ಪ್ರಚಾರ ಮಾಡುತ್ತಿರುವ ಕಂಪನಿಯೊಂದು ಬರೆದುಕೊಟ್ಟಂತೆ ಅವರು ಬುಧವಾರ(ಜೂ.4)ದಂದು ಇಡೀ ದಿನದ ಡ್ರಾಮಾ ನಡೆಸಿದರು. ಇದು ಅಸೂಕ್ಷ್ಮತೆಯ ಪರಮಾವಧಿ. ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸಿಎಂ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ಮಾನವೀಯ ಗುಣಗಳಿಲ್ಲ, ಅವರು ಸಾವಿನಲ್ಲಿಯೂ ಪ್ರಚಾರಕ್ಕೆ ಹಪಾಹಪಿಸಿದ ವ್ಯಕ್ತಿ," ಎಂದು ಆರೋಪಿಸಿದರು.

ವಿಧಾನನೌಧ ಮೆಟ್ಟಿಲು ಮೇಲೆ ಇವರು ಕಾರ್ಯಕ್ರಮ ಮಾಡಿದ ಉದ್ದೇಶ ಏನು? ಇಡೀ ಸರ್ಕಾರ ಅದನ್ನು ಕುಟುಂಬ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿತ್ತು. ಅದು ಕೇವಲ ಡಿಸಿಎಂ ದಾದಾಗಿರಿಯ ಶೋ ಆಗಿತ್ತು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹಲವರ ಜೀವ ಹೋಗಿದೆ ಎಂಬ ವಿಷಯ ಗೊತ್ತಾದ ಮೇಲೆಯೂ ಇವರು ಅಲ್ಲಿ ಕಾರ್ಯಕ್ರಮ ನಡೆಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೌಡಿಯಂತೆ ವರ್ತನೆ

ಈ ವ್ಯಕ್ತಿ ಪ್ರಚಾರದ ಗೀಳಿಗೆ ಅನೇಕ ಅಮಾಯಕರ ಪ್ರಾಣಗಳು ಹೋದವು. ಒಬ್ಬ ರೌಡಿಯಂತೆ ವರ್ತಿಸಿದ್ದಾರೆ. ತನ್ನ ಶೋಕಿಗೆ ಇಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ. ಸರ್ಕಾರದ ಹೊಣೆಗೇಡಿತನ ಹಾಗೂ ಡಿಸಿಎಂ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಷ್ಟು ಜೀವಗಳನ್ನು ಬಲಿ ಕೊಟ್ಟರು. ಇದಕ್ಕೆ ಸರ್ಕಾರವೇ ಹೊಣೆ. ವಿಧಾನಸೌಧದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮಾಡಿಕೊಂಡಿದ್ದರು. ಈಗ ಕೇವಲ ತನಿಖೆಗೆ ಆದೇಶ ಕೊಟ್ಟು, ಮೃತರಿಗೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವಂತಿಲ್ಲ ಎಂದರು.

ಡಿಸಿಎಂ ಕರ್ನಾಟಕದ ಸೂಪರ್ ಚೀಫ್ ಮಿನಿಸ್ಟರ್ ರೀತಿ ವರ್ತಿಸಿದ್ದಾರೆ. ಅವರೇ ದುರಂತಕ್ಕೆ ನೇರ ಹೊಣೆ. ಆರ್‌ಸಿಬಿ ಗೆಲುವಿನ ಶ್ರೇಯ ಪಡೆದುಕೊಳ್ಳಲು ಕಾರ್ಯಕ್ರಮ ಮಾಡಿದ ಡಿಸಿಎಂ ದುರಂತದ ಹೊಣೆಯನ್ನು ಹೊರಲೇಬೇಕು. ಅವರು ಇಡೀ ತಂಡವನ್ನೇ ಹೈಜಾಕ್ ಮಾಡಿದರು. ಪೊಲೀಸರನ್ನು ಹತ್ತಿರಕ್ಕೆ ಬರದಂತೆ ತಡೆದಿದ್ದಾರೆ ಎಂದು ಸಚಿವರು ಆರೋಪಿಸಿದರು.

ಕುಟುಂಬಕ್ಕಾಗಿ ಕಾರ್ಯಕ್ರಮ

ವಿಧಾನಸೌಧದ ಮೆಟ್ಟಿಲು ಮೇಲೆ ನಡೆದ ಕಾರ್ಯಕ್ರಮದ ಮೇಲೆ ಬಂದಿದ್ದ ಜನರನ್ನು ವೇದಿಕೆಯ ಮೇಲೆ ಕತ್ತು ಹಿಡಿದು ತಳ್ಳುತ್ತಾರೆ. ಇಂಥ ವ್ಯಕ್ತಿಯನ್ನು ನಾವು ಮನುಷ್ಯ ಎಂದೂ ಕರೆಯಲು ಆಗುತ್ತದೆಯೇ? ಪೊಲೀಸರು ಎರಡು ಕಡೆ ಕಾರ್ಯಕ್ರಮ ಬೇಡ ಎಂದರೂ ಕೇಳದೆ ವಿಧಾನಸೌಧ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇವರೇ ಜನರಿಗೆ ಹೇಳಿಕೊಂಡು, ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದ್ದಾರೆ. ವಿಧಾನಸೌಧ ಮುಂದೆ ಇವರ ಮಕ್ಕಳು, ಮೊಮ್ಮಕ್ಕಳು, ಅಧಿಕಾರಿಗಳ ಹಾಗೂ ಅವರ ಹಿಂಬಾಲಕರು ಸೇರಿದ್ದರು. ಇವರು ಕಾರ್ಯಕ್ರಮ ಮಾಡುವುದಕ್ಕೆ ಇಡೀ ಆರ್‌ಸಿಬಿ ಗೆಲುವನ್ನು ಬಳಕೆ ಮಾಡಿಕೊಂಡರು. ಆಟಗಾರರನ್ನು ಪಕ್ಕಕ್ಕೆ ತಳ್ಳಿ ಇವರೇ ಮಿಂಚಿದ್ದಾರೆ ಎಂದು ದೂರಿದರು.

ಕ್ರೀಡಾಮಂತ್ರಿ ಎಲ್ಲಿ ಹೋದರು?

ಕ್ರೀಡಾಂಗಣದ ಬಾಗಿಲು ಮುಚ್ಚಿಸಿದ್ದರು. ಮೊದಲೇ ಅಭಿಮಾನಿಗಳನ್ನು ಮೈದಾನದೊಳಕ್ಕೆ ಬಿಟ್ಟಿದ್ದರೆ ಈ ಸಮಸ್ಯೆ ಸೃಷ್ಟಿ ಆಗುತ್ತಿರಲಿಲ್ಲ. ಅವರೇ ಮೈದಾನದ ಬಾಗಿಲು ಬಂದ್ ಮಾಡಲು ಹೇಳಿದ್ದರು. ಡಿಸಿಎಂ ತಮ್ಮ ವರ್ಚಸ್ಸು ವೃದ್ಧಿ ಮಾಡಿಕೊಳ್ಳಲು ಇಷ್ಟೆಲ್ಲಾ ಮಾಡಿದ್ದಾರೆ. ಬೇರೆ ಮಂತ್ರಿಗಳು ಇರಲಿಲ್ಲವೇ? ಕ್ರೀಡಾಮಂತ್ರಿ ಎಲ್ಲಿ ಹೋದರು? ಅವರಿಗೆ ಜವಾಬ್ದಾರಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿರುವ ಲೋಪಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಿದೆ. ಅತ್ಯಂತ ಧಾರುಣವಾದ ಸಂಗತಿ ಎಂದರೆ, ಕ್ರೀಡಾಂಗಣದ ಹೊರಗೆ ಮೃತದೇಹಗಳು ಬಿದ್ದಿದ್ದರೂ ಇವರು ಮೆರವಣಿಗೆಯಲ್ಲಿ ಮೈದಾನಕ್ಕೆ ತೆರಳಿ ಇವರೇ ಕಪ್ ಗೆದ್ದಂತೆ, ಆರ್‌ಸಿಬಿ ಕ್ಯಾಪ್ಟನ್ ಎನ್ನುವಂತೆ ಆಟಗಾರರ ಮುಂದೆ ಕಪ್‌ಗೆ ಮುತ್ತಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದ ಹದಿನಾರು ಗಂಟೆಗಳ ನಂತರ ಇಂದು ಇವರಿಗೆ ಕಣ್ಣೀರು ಬಂದಿದೆ. ಇವರು ಎಂತಹ ಕಟುಕರು ಎನ್ನುವುದು ಇದರಿಂದ ಅರ್ಥವಾಗುತ್ತದೆ. ತನಿಖೆ ಎನ್ನುವುದು ಕೇವಲ ಜನರ ಕಣ್ಣೊರೆಸುವ ತಂತ್ರ ಅಷ್ಟೇ. ರಾಜಕೀಯದ ಪ್ರಶ್ನೆ ಇಲ್ಲ. ಈ ಮುಖ್ಯಮಂತ್ರಿಗೆ ನಾಡಿನ ಜನರ ಬಗ್ಗೆ ಗೌರವ ಇದ್ದರೆ, ಮೊದಲು ಈ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರ ಹಾಕಬೇಕು ಎಂದು ಒತ್ತಾಯ ಮಾಡಿದರು.

ರಾಜ್ಯದಲ್ಲಿ ಗೃಹಸಚಿವರಿಲ್ಲ

ಗೃಹ ಸಚಿವರು ಎನ್ನುವವರು ರಾಜ್ಯದಲ್ಲಿ ಇಲ್ಲವೇ ಇಲ್ಲ. ಕೂರು ಎಂದರೆ ಕೂರು, ಏಳು ಎಂದರೆ ಏಳುತ್ತಾರೆ. ಕೇವಲ ಡ್ರಿಲ್ ಮಾಡುವ ಗೃಹ ಸಚಿವರು ರಾಜ್ಯದಲ್ಲಿದ್ದಾರೆ. ಅವರಿಗೆ ಧೈರ್ಯ ಇಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಲಹೆ ಧಿಕ್ಕರಿಸಿ ಸರ್ಕಾರ ನಡೆದುಕೊಂಡಿದೆ ಎಂದರು.

ಒಬ್ಬ ಜಿಲ್ಲಾಧಿಕಾರಿ ಏನು ತನಿಖೆ ಮಾಡಲು ಸಾಧ್ಯ? ಅದರಿಂದ ಏನು ಉಪಯೋಗ? ಸರ್ಕಾರ ಹೇಳಿದಂತೆ ಅವರು ಬರೆದುಕೊಡುತ್ತಾರೆ. ವಿಧಾನಸೌಧ ಬಳಿಯೇ ಇವರ ಬಂಧು ಬಳಗ ಹಾವಳಿ ಹೆಚ್ಚಾದಾಗ ಕ್ರಿಕೆಟ್ ಪ್ರೇಮಿಗಳ ಸಹನೆ ಕಟ್ಟೆಯೊಡೆದಿದೆ. ಅಲ್ಲಿಯೇ ಜನ ಕಲ್ಲು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ಜನ ಸತ್ತ ಮೇಲೆಯೂ ಡಿಸಿಎಂ ಕ್ರೀಡಾಂಗಣಕ್ಕೆ ಹೋಗಿ ಟ್ರೋಫಿಗೆ ಮುತ್ತಿಟ್ಟರು. ಅದು ಅವರ ನಡವಳಿಕೆ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Tags:    

Similar News