Intel Corporation |ಇಂಟೆಲ್ ಕಾರ್ಪೊರೇಷನ್ ಸಿಟಿಒ ಆಗಿ ಬೆಳಗಾವಿಯ ಸಚಿನ್ ಕಟ್ಟಿ ನೇಮಕ
ಇಂಟೆಲ್ ಕಾರ್ಪೊರೇಷನ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ಅವರನ್ನು ಇಂಟೆಲ್ ಕಾರ್ಪೊರೇಷನ್ ಸಿಇಒ ಲಿಪ್-ಬು ಟ್ಯಾನ್ ಅವರು ನೇಮಕ ಮಾಡಿದ್ದಾರೆ.;
ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಅಮೆರಿಕ ಮೂಲದ ಇಂಟೆಲ್ ಕಾರ್ಪೊರೇಶನ್ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ (ಸಿಟಿಒ) ಬೆಳಗಾವಿ ಮೂಲದ ಸಚಿನ್ ಕಟ್ಟಿ ಆಯ್ಕೆಯಾಗಿದ್ದಾರೆ. ಪ್ರಸ್ತುತ, ಇಂಟೆಲ್ ಕಾರ್ಪೊರೇಷನ್‌ಲ್ಲಿ ಸಚಿನ್ ಕಟ್ಟಿ ಅವರು, ಎಸ್‌ವಿಪಿ, ನೆಟ್ ವರ್ಕ್ ಮತ್ತು ಎಡ್ಜ್ ಗ್ರೂಪಿನ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇಂಟೆಲ್ ಸಂಸ್ಥೆಯ ಸಿಇಒ ಲಿಪ್-ಬು ಟ್ಯಾನ್ ಅವರು ಸಚಿನ್ ಕಟ್ಟಿ ಅವರನ್ನು ಪ್ರಮುಖ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ರಾಯಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆ ಮೂಲಕ ಭಾರತದ ಮತ್ತೊಬ್ಬ ಪ್ರತಿಭೆಗೆ ವಿಶ್ವಮಟ್ಟದಲ್ಲಿ ಮನ್ನಣೆ ದೊರೆತಂತಾಗಿದೆ. ಈಗಾಗಲೇ ಗೂಗಲ್, ಮೈಕ್ರೋಸಾಫ್ಟ್ ಕಂಪೆನಿಗಳಲ್ಲಿ ಭಾರತೀಯ ಮೂಲದವರು ಅತ್ಯುನ್ನತ ಹುದ್ದೆಗೇರಿದ್ದಾರೆ.
ಯಾರು ಈ ಸಚಿನ್ ಕಟ್ಟಿ?
ಬೆಳಗಾವಿ ಮೂಲದ ಸಚಿನ್ ಕಟ್ಟಿ 2003ರಲ್ಲಿ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದರು. 2005 ಮತ್ತು 2009 ರಲ್ಲಿ ಎಂಐಟಿಯಿಂದ ಕ್ರಮವಾಗಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಎಸ್. ಮತ್ತು ಪಿಎಚ್.ಡಿ ಪದವಿ ಪಡೆದರು.
ಬಳಿಕ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ತೆರಳಿ ಎಂ.ಎಸ್ ಹಾಗೂ ಪಿಎಚ್.ಡಿ ಪದವಿ ಪಡೆದರು. ಕೆಲ ಸಮಯದವರೆಗೆ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.
ಫುಲ್-ಡ್ಯೂಪ್ಲೆಕ್ಸ್ ರೇಡಿಯೋ ತಂತ್ರಜ್ಞಾನದಡಿ ಕಾರ್ಯ ನಿರ್ವಹಿಸುವ ಕುಮು ನೆಟ್ವರ್ಕ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ನಂತರ ಡೀಪ್ ಲರ್ನಿಂಗ್ ಹಾಗೂ ರಿಯಲ್ ಟೈಮ್ ಅಪ್ಲಿಕೇಷನ್ ಟೆಕ್ನಾಲಜಿಯಡಿ ಉಹಾನಾ ಎಂಬ ಸ್ಟಾರ್ಟ್ ಅಪ್ ಸ್ಥಾಪಿಸಿದ್ದರು. ಸದ್ಯ ಇಂಟೆಲ್ ಕಾರ್ಪೊರೇಷನ್ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಆಯ್ಕೆಯಾಗಿರುವ ಸಚಿನ್ ಕಟ್ಟಿ ಅವರು, ಪತ್ನಿ ಸೀಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಅಮೆರಿಕಾದಲ್ಲೇ ನೆಲೆಸಿದ್ದಾರೆ.
ಎಐ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ
ಸಚಿನ್ ಕಟ್ಟಿ ಅವರು ಇಂಟೆಲ್ ಕಾರ್ಪೊರೇಷನ್ ಸಂಸ್ಥೆಯ ಕೃತಕ ಬುದ್ದಿಮತ್ತೆ(ಎಐ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಲಿದ್ದಾರೆ. ಇಂಟೆಲ್ ಸಂಸ್ಥೆಯಲ್ಲೇ ನೆಟ್ವರ್ಕ್ ವಿಭಾಗದ ಇಂಟೆಲಿಜೆಂಟ್ ಎಡ್ಜ್ ಉತ್ಪನ್ನಗಳ ಗುಣಮಟ್ಟ ವೃದ್ದಿಸುವ ತಂಡವನ್ನು ಮುನ್ನಡೆಸುತ್ತಿದ್ದರು.
ಕುಟುಂಬದಲ್ಲಿ ಮನೆ ಮಾಡಿದ ಸಂತಸ
ಸಚಿನ್ ಕಟ್ಟಿ ಅವರು ಇಂಟೆಲ್ ಕಾರ್ಪೊರೇಷನ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಸಚಿನ್ ಕಟ್ಟಿ ಅವರ ಸಹೋದರ ಅಮಿತ್ ಕಟ್ಟಿ ಮಾಧ್ಯಮಗಳೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.
ನನ್ನ ಸಹೋದರ ಸಚಿನ್ ಕಟ್ಟಿ ಆರನೇ ತರಗತಿಯಲ್ಲಿ ಇದ್ದಾಗಲೇ ಅತ್ಯುನ್ನತ ಸ್ಥಾನಕ್ಕೇರುವ ಗುರಿ ಹೊಂದಿದ್ದ. ಶಾಲೆಯ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಬಾಂಬೆ ಐಐಟಿಯಲ್ಲಿ ವ್ಯಾಸಂಗ ಮಾಡಿದ. ಈಗ ಸಚಿನ್ ತನ್ನ ಗುರಿ ಮುಟ್ಟಿರುವುದು ನಮಗೆಲ್ಲಾ ಬಹಳ ಸಂತೋಷ ತರಿಸಿದೆ ಎಂದು ಹೇಳಿದ್ದಾರೆ.
ಸಚಿನ್‌ಗೆ ರೊಟ್ಟಿ, ಜುಂಕಾ, ಮಿಸಳ್ ಪಾವ್ ಅಂದರೆ ತುಂಬಾ ಇಷ್ಟ. ಅವರು ದೊಡ್ಡ ಹುದ್ದೆಗೇರಿದರೂ ಇಂದಿಗೂ ಕುಟುಂಬ, ಸ್ನೇಹಿತರನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಬೆಳಗಾವಿಯ ಮನೆಗೆ ಬಂದು ಹೋಗುತ್ತಾರೆ ಎಂದು ಹೇಳಿದ್ದಾರೆ.