ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ದರೋಡೆ: ಹಾಡಹಗಲೇ 200 ಗ್ರಾಂ ಚಿನ್ನಾಭರಣ ಕಳವು
ಪರಿಚಿತರಿರಬಹುದು ಎಂದು ನಾಗವೇಣಿ ಬಾಗಿಲು ತೆರೆದಾಗ, ಬಂದ ಮಹಿಳೆ ಕುಡಿಯಲು ನೀರು ಕೇಳಿದ್ದಾರೆ. ನಾಗವೇಣಿ ಅಡುಗೆ ಮನೆಗೆ ಹೋದಾಗ, ಇಬ್ಬರು ಪುರುಷರಲ್ಲಿ ಒಬ್ಬರು ಒಳನುಗ್ಗಿ ಅವರ ಕೈ-ಕಾಲು ಕಟ್ಟಿ ಹಾಕಿದ್ದಾರೆ. ನಂತರ ಕತ್ತಿಗೆ ಚಾಕು ಹಿಡಿದು ಬೆದರಿಸಿ, ಬೀರುವಿನ ಲಾಕರ್ ಕೀ ಪಡೆದು 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮಹಿಳೆಯ ಕೈ-ಕಾಲು ಕಟ್ಟಿ ಹಾಕಿ 200 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಈ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ನೆರಳೂರು ಗ್ರಾಮದ ನಿವಾಸಿಗಳಾದ ನಾಗವೇಣಿ ಮತ್ತು ರವಿಕುಮಾರ್ ಅವರ ಮನೆಗೆ ಮೂವರು ದುಷ್ಕರ್ಮಿಗಳು (ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ) ಬಂದಿದ್ದರು. ರವಿಕುಮಾರ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಘಟನೆ ನಡೆದಾಗ ಮನೆಯಲ್ಲಿರಲಿಲ್ಲ. ಮನೆಯಲ್ಲಿ ನಾಗವೇಣಿ ಒಬ್ಬರೇ ಇರುವುದನ್ನು ಗಮನಿಸಿ, ದುಷ್ಕರ್ಮಿಗಳು ದರೋಡೆಗೆ ಯೋಜನೆ ರೂಪಿಸಿದ್ದಾರೆ.
ಪರಿಚಿತರಿರಬಹುದು ಎಂದು ನಾಗವೇಣಿ ಬಾಗಿಲು ತೆರೆದಾಗ, ಬಂದ ಮಹಿಳೆ ಕುಡಿಯಲು ನೀರು ಕೇಳಿದ್ದಾರೆ. ನಾಗವೇಣಿ ಅಡುಗೆ ಮನೆಗೆ ಹೋದಾಗ, ಇಬ್ಬರು ಪುರುಷರಲ್ಲಿ ಒಬ್ಬರು ಒಳನುಗ್ಗಿ ಅವರ ಕೈ-ಕಾಲು ಕಟ್ಟಿ ಹಾಕಿದ್ದಾರೆ. ನಂತರ ಕತ್ತಿಗೆ ಚಾಕು ಹಿಡಿದು ಬೆದರಿಸಿ, ಬೀರುವಿನ ಲಾಕರ್ ಕೀ ಪಡೆದು 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ನಾಗವೇಣಿ ಅವರ ಕತ್ತಿನಲ್ಲಿದ್ದ ಚಿನ್ನದ ನೆಕ್‌ಲೆಸ್, ಓಲೆ, ಎರಡು ನೆಕ್‌ಚೈನ್, ಉಂಗುರ, ಲಾಂಗ್‌ಚೈನ್ ಹಾಗೂ 8 ಬೆಳ್ಳಿ ಕಾಲ್ಗೆಜ್ಜೆಗಳು ಮತ್ತು ಕುಂಕುಮದ ಬಟ್ಟಲನ್ನು ದೋಚಿದ್ದಾರೆ. ಕಳುವಾದ ಚಿನ್ನಾಭರಣದ ಮೌಲ್ಯ ಅಂದಾಜು 15 ರೂಪಾಯಿಗೂ ಲಕ್ಷಕ್ಕೂ ಅಧಿಕ ಎಂದು ತಿಳಿದುಬಂದಿದೆ.
ಪೊಲೀಸ್ ತನಿಖೆ
ಘಟನಾ ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಮೋಹನ್ ಕುಮಾರ್, ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.