ಕಂಟೋನ್ಮೆಂಟ್ ಕಾಲೊನಿಯ8.61 ಎಕರೆಯನ್ನು ಜೀವವೈವಿಧ್ಯತೆಯ ಪಾರಂಪರಿಕ ತಾಣವಾಗಿ ಘೋಷಣೆ

ಕಂಟೋನ್ಮೆಂಟ್ ಕಾಲೊನಿಯು ಸಸ್ಯ, ಪಕ್ಷಿ ಸಂಕುಲ ಮತ್ತು ಕೀಟ ಸಂಕುಲದ ತಾಣ ಮಾತ್ರವಲ್ಲದೇ, ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವಾಗಿದೆ. 371 ಮರಗಳನ್ನು ಸಂರಕ್ಷಿಸುವ ನಿರ್ಧಾರ ಐತಿಹಾಸಿಕವಾಗಿದೆ.;

Update: 2025-09-10 14:30 GMT

ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ವಿವಿಧ 50 ಪ್ರಭೇದದ 371 ಮರಗಳಿಂದ ಕೂಡಿದ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯ 8.61 ಎಕರೆ ಪ್ರದೇಶವನ್ನು ಜೀವವೈವಿಧ್ಯತೆಯ ಪಾರಂಪರಿಕ ತಾಣ  ಎಂಬುದಾಗಿ ಘೋಷಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಜೀವ ವೈವಿಧ್ಯ ಮಂಡಳಿಯ ಸಭೆಯಲ್ಲಿ ಇತಿಹಾಸ ಪ್ರಸಿದ್ಧ ಮತ್ತು ಸಸ್ಯ ಶ್ರೀಮಂತಿಕೆಯಿಂದ ಕೂಡಿದ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯ 8.61 ಎಕರೆ ಪ್ರದೇಶವನ್ನು ಜೈವಿಕ ವೈವಿಧ್ಯ ಕಾಯ್ದೆ, 2002ರ ಸೆಕ್ಷನ್ 37ರ ಅಡಿಯಲ್ಲಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ತೀರ್ಮಾನ ಕೈಗೊಳ್ಳಲಾಗಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ 34,843 ಚದರಡಿಯ ಪ್ರದೇಶ ಸಸ್ಯ ಸಂಕುಲ, ಪಕ್ಷಿ ಸಂಕುಲ ಮತ್ತು ಕೀಟ ಸಂಕುಲದ ತಾಣವಷ್ಟೇ ಅಲ್ಲದೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವಾಗಿದೆ ಎಂದು ಹೇಳಿದರು.

50-60 ವರ್ಷಗಳಿಂದ ಬೆಳೆದ ಬೃಹತ್ ಮರಗಳಿರುವ ಈ ಸುಂದರ ಪ್ರದೇಶವನ್ನು ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ ಖಾಸಗಿ ಸಂಸ್ಥೆಯೊಂದಕ್ಕೆ 60 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿರುವ 368 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಮರಗಳ ಹನನಕ್ಕೆ ಸ್ಥಳೀಯರು ಸೇರಿದಂತೆ ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಕಳೆದ ಜೂ. 20ರಂದು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಪ್ರದೇಶ ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. 1920ರಲ್ಲಿ ಮಹಾತ್ಮಾ ಗಾಂಧಿ ಆ ಜಾಗದಲ್ಲಿ ಸ್ವಾತಂತ್ರ್ಯ ಚಳವಳಿಗಾರರೊಂದಿಗೆ ಸಂವಾದ ನಡೆಸಿದ್ದರು. ವೃಕ್ಷ ಸಮೃದ್ಧವಾದ ಈ ಪ್ರದೇಶ ಇಂಗಾಲದ ಡೈ ಆಕ್ಸೈಡ್ ನಿಯಂತ್ರಿಸಿ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಇದರ ಸಂರಕ್ಷಣೆಗೆ ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಸಂಬಂಧ ಸಲಹೆ, ಸೂಚನೆ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಸಾರ್ವಜನಿಕರನ್ನು ಕೋರಲಾಗಿತ್ತು ಎಂದರು.

ಸುಮಾರು 15 ಸಾವಿರ ಜನರಿಂದ ವೃಕ್ಷ ರಕ್ಷಣೆಗೆ ಮನವಿ:

ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿರುವ ಈ ಮರ ಕಡಿದು ವಾಣಿಜ್ಯ ಚಟುವಟಿಕೆ ನಡೆಸದಂತೆ ನಡೆದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನದಲ್ಲಿ 3081 ಜನರು ಬೆಂಬಲ ನೀಡಿದ್ದರು. 368 ವೃಕ್ಷಗಳ ಹನನ ಮಾಡದಂತೆ ನಡೆದ ಮತ್ತೊಂದು ಡಿಜಿಟಲ್ ಅಭಿಯಾನದಲ್ಲಿ 10670 ಜನರು ಈ ಪ್ರದೇಶದ ಸಂರಕ್ಷಣೆ ಮಾಡುವಂತೆ ಮತ್ತು ಮರ ಕಡಿಯದಂತೆ ಸೂಚಿಸಿದ್ದರು. ಇದರ ಜೊತೆಗೆ 972 ಪರಿಸರ ಪ್ರೇಮಿಗಳು, ಸಾರ್ವಜನಿಕರು ಇ-ಮೇಲ್ ಮೂಲಕ 368 ಮರಗಳ ಸಂರಕ್ಷಣೆಗೆ ಮತ್ತು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಇದಲ್ಲದೆ ನೂರಾರು ಜನರ ಸಹಿ ಇರುವ ಹಲವು ಮನವಿಗಳೂ ಬಂದಿದ್ದವು. ಒಟ್ಟಾರೆ 15 ಸಾವಿರಕ್ಕೂ ಹೆಚ್ಚು ಜನರು ಮರ ಕಡಿಯದಂತೆ ಮತ್ತು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಸಂರಕ್ಷಿಸುವಂತೆ ಮತ್ತು 368 ಮರ ಕಡಿಯದಂತೆ ಮನವಿ ಮಾಡಿದ್ದರು. ಇಲ್ಲಿ ಸಮೀಕ್ಷೆ ನಡೆಸಿದಾಗ 371 ಮರಗಳಿರುವುದು ದೃಢಪಟ್ಟಿತು ಎಂದರು.

ಕಂಟೋನ್ಮೆಂಟ್ ಕಾಲೋನಿಯ ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸುವ ಸರ್ಕಾರದ ನಿರ್ಧಾರದ ವಿರುದ್ಧ ಕೇವಲ 2 ಮನವಿಗಳು ಮಾತ್ರ ಬಂದಿದ್ದವು. ಸಾರ್ವಜನಿಕರ ಕಳಕಳಿ, ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಈ ತಾಣದ ಸೌಂದರ್ಯ, ಐತಿಹಾಸಿಕ ಮಹತ್ವ, ವೃಕ್ಷ ಸಮೃದ್ಧತೆ ಮತ್ತು ಜೀವ ವೈವಿಧ್ಯ ಸಂರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ವಲಸೆ ಹಕ್ಕಿಗಳೂ ಸೇರಿದಂತೆ ನೂರಾರು ಪಕ್ಷಿಗಳ ಆವಾಸಸ್ಥಾನ ಮತ್ತು ಸಂತಾನೋತ್ಪತ್ತಿಯ ತಾಣವಾದ ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 

ಬೆಂಗಳೂರು ನಗರದ ವಾಯು ಗುಣಮಟ್ಟದಲ್ಲಿ ಈಗಾಗಲೇ ಕುಸಿತ ಕಂಡು ಬಂದಿದೆ. ಹಸಿರು ಹೊದಿಕೆ ಕ್ಷೀಣಿಸಿದೆ. ಇಡೀ ವಿಶ್ವವೇ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಇಲ್ಲಿರುವ 371 ಮರಗಳನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಈ ನಿರ್ಧಾರ ಐತಿಹಾಸಿಕವಾಗಿದೆ ಎಂದು ತಿಳಿಸಿದರು.

Tags:    

Similar News