Caste Census | ಸಿಎಂ ಕುರ್ಚಿಗೆ ಕಂಟಕ ಬಂದಾಗ ಜಾತಿಗಣತಿ ಸ್ಮರಣೆ: ಆರ್. ಅಶೋಕ್ ಕಿಡಿ
ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯನ್ನು ಏಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.;
ಜಾತಿ ಜನಗಣತಿ ವರದಿ ಮಂಡನೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ʼಸಂಕಟ ಬಂದಾಗ ವೆಂಕಟರಮಣʼ ಎಂಬಂತೆ ತಮ್ಮ ಕುರ್ಚಿಗೆ ಕಂಟಕ ಬಂದಾಗ ಮಾತ್ರ ಜಾತಿ ಜನಗಣತಿ ನೆನಪಾಗುತ್ತದೆ. ವರದಿ ಅನುಷ್ಠಾನಕ್ಕೆ ಬಿಜೆಪಿ ಪಕ್ಷ ಅಥವಾ ನಮ್ಮ ಯಾವ ತಕರಾರು ಇಲ್ಲ. ವಿರೋಧವೂ ಇಲ್ಲ. ಬಿಜೆಪಿ ಮೂಲಸಿದ್ಧಾಂತ 'ಅಂತ್ಯೋದಯ'ದ ಪರಿಕಲ್ಪನೆಯಲ್ಲೇ ತಳ ಸಮುದಾಯಗಳನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಬದ್ಧತೆ ಇದೆ. ವರದಿ ಜಾರಿಗೊಳಿಸುವ ಪ್ರಯತ್ನಗಳಿಗೆ ಬಿಜೆಪಿ ಬೆಂಬಲ ಇರಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ. ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನು ಏಣಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ. ನಾಳಿನ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚೆಯಾಗಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈಗ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ಅವರ 'ಆತ್ಮಸಾಕ್ಷಿ'ಯನ್ನೇ ಪ್ರಶ್ನಿಸಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಜಾತಿಗಣತಿ ವರದಿ ಜಾರಿ ಮಾಡದ ಕುರಿತು ಹಲವು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಜಾತಿಗಣತಿಯ ಬಗ್ಗೆ ಬದ್ಧತೆ ಇದ್ದಿದ್ದರೆ, 2018ರಲ್ಲೇ ಕಾಂತರಾಜು ವರದಿಯನ್ನು ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ, ಹತ್ತು ವರ್ಷಗಳ ಹಿಂದೆ ಕೈಗೊಂಡ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಈ ವರದಿಯನ್ನು ಮುನ್ನೆಲೆಗೆ ತರುವ ತರಾತುರಿ ಏಕೆ, ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ಇದನ್ನ ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿ ಮಾಡಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಳೆದ 20 ತಿಂಗಳಿನಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರ್ವಸಮ್ಮತ ನಿಲುವಿಗೆ ಬರುವ ಬದಲು ಈಗ ದಿಢೀರನೆ ಏಕಾಏಕಿ ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರ ಹಂಚಿಕೆ ಒಪ್ಪಂದದಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನು ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೇ?, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ಹಗರಣ, ಅಬಕಾರಿ ಇಲಾಖೆ ಹಗರಣ, ಕಂಟ್ರಾಕ್ಟರ್ ಗಳ ಕಮಿಷನ್ ಆರೋಪ, ಅಧಿಕಾರಿಗಳು, ಗುತ್ತಿಗೆದಾರರ ಸರಣಿ ಆತ್ಮಹತ್ಯೆಯಂತಹ ಸಾಲು ಸಾಲು ವಿವಾದಗಳು, ಕಳಂಕಗಳ ಸುಳಿಯಲ್ಲಿ ಮುಜುಗರ ಅನುಭವಿಸುತ್ತಿರುವ ಪರಿಸ್ಥಿತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವರದಿಯನ್ನು ದಾಳವಾಗಿ ಬಳಸಲಾಗುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತಿವೆ ಎಂದಿದ್ದಾರೆ.