ಸಿಇಎನ್‌ ಪೊಲೀಸ್‌ ಠಾಣೆಗೆ ಎಸ್ಪಿ ಶ್ರೇಣಿಯ ಅಧಿಕಾರಿಗಳ ನೇಮಕ; ಡಾ.ಜಿ.ಪರಮೇಶ್ವರ್‌

ಆಧುನಿಕ ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳೂ ಹೆಚ್ಚುತ್ತಿದ್ದು, ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಂತ್ರಜ್ಞಾನ ಆಧರಿತವಾಗಿಯೇ ತರಬೇತಿ ನೀಡಲಾಗುವುದು .;

Update: 2024-10-06 10:04 GMT

ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ತಡೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಸಿಇಎನ್‌( ಸೈಬರ್ ಅಪರಾಧ, ಆರ್ಥಿಕ ಅಪರಾಧ ಹಾಗೂ ಮಾದಕ ದ್ರವ್ಯ) ಠಾಣೆಗಳಿಗೆ ಎಸ್ಪಿ ಶ್ರೇಣಿಯ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಧಾರವಾಡದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗ ಹಾಗೂ ಪ್ರಯೋಗಾಲಯಗಳಿಗೆ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರತಿದಿನ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್‌ ಅಪರಾಧಗಳಿಗೆ ಯಾವುದೇ ಅಡೆತಡೆ ಇಲ್ಲ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದರೂ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಆಧುನಿಕ ಅಪರಾಧಗಳ ತನಿಖೆಗೆ ಅನುಸಾರವಾಗಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದರು.

ವಿಧಿ ವಿಜ್ಞಾನ ಸಂಸ್ಥೆಯಿಂದ ರಾಜ್ಯದ ಪೊಲೀಸ್‌ ಇಲಾಖೆಗೆ ಹೆಚ್ಚು ಉಪಯೋಗವಾಗಲಿದೆ. ಈಗ ಪ್ರತಿ ಜಿಲ್ಲೆಗೆ ಒಂದರಂತೆ ರಾಜ್ಯದಲ್ಲಿ ಒಟ್ಟು 43 ಸೆನ್ ಪೊಲೀಸ್‌ ಠಾಣೆಗಳಿವೆ. ಡಿವೈಎಸ್ಪಿ ಶ್ರೇಣಿಯ ಅಧಿಕಾರಿಗಳಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಎಸ್.ಪಿ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ ಬೆಳೆದಂತೆ ಅಪರಾಧ ಪ್ರಕರಣಗಳಿಗೆ ಲಗಾಮಿಲ್ಲದಂತಾಗಿದೆ. ಪೊಲೀಸರಿಗೆ ಗುಪ್ತಚರ ವಿಭಾಗದಲ್ಲಿ ನೀಡುವಂತೆ ಸೆನ್‌ ಠಾಣೆ ಪೊಲೀಸರಿಗೆ ಪ್ರತ್ಯೇಕ ತರಬೇತಿ ತರಬೇತಿ ನೀಡಲಾಗುವುದ ಎಂದು ಪರಮೇಶ್ವರ್‌ ಹೇಳಿದರು.

ಗುಜರಾತಿನಲ್ಲಿ ಸೈಬರ್ ವಿಶ್ವ ವಿದ್ಯಾಲಯವಿದೆ. ಇಲ್ಲಿ ವಿವಿಧ ದೇಶಗಳಿಂದ ಬಂದು ತರಬೇತಿ ಪಡೆಯುತ್ತಿದ್ದಾರೆ. ಸೈಬರ್‌ ವಿಶ್ವವಿದ್ಯಾಲಯದಡಿಯೇ ಧಾರವಾಡದಲ್ಲಿ ವಿಧಿ ವಿಜ್ಞಾನ ಸಂಸ್ಥೆ ಸ್ಥಾಪಿಸಲಾಗಿದ್ದು, ಇದರಿಂದ ಪೊಲೀಸ್‌ ಇಲಾಖೆಗೆ ಅನುಕೂಲವಾಗಲಿದೆ ಎಂದರು.

ಮಾದಕ ವಸ್ತುಗಳ ಮಾರಾಟ, ಬಳಕೆ ಕುರಿತು ಈಗಾಗಲೇ ರಾಜ್ಯ ಸರ್ಕಾರ ಸಮರ ಸಾರಿದೆ. ಸಿಎಂ ಸಿದ್ದರಾಮಯ್ಯ ಅವರು ಇದಕ್ಕಾಗಿಯೇ ವಿಶೇಷ ಕಾರ್ಯಪಡೆ ರಚಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ 150 ಕೋಟಿ ರೂ. ಡ್ರಗ್ಸ್ ಬಂದಿದ್ದು, ಸಾಕಷ್ಟು ಎಚ್ಚರದ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಹೇಳಿದರು.

Tags:    

Similar News