Internal Reservation | ಒಳ ಮೀಸಲಾತಿ ಸಮೀಕ್ಷೆಗಾಗಿ ನೇಮಕಾತಿ ಅಧಿಸೂಚನೆ ಸ್ಥಗಿತ ; ಆತಂಕದಲ್ಲಿ 25,000 ಆಕಾಂಕ್ಷಿಗಳು

ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹುದ್ದೆಗಳಿಗೆ ಹೊಸ ಅಧಿಸೂಚನೆ, ಬ್ಯಾಕ್‌ಲಾಗ್‌ ಹುದ್ದೆಗಳು ಹಾಗೂ ನೌಕರರ ಮುಂಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಆದೇಶಿಸಿರುವುದು ಇತರೆ ಸಮುದಾಯಗಳ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.;

Update: 2025-05-23 03:38 GMT

ಪರಿಶಿಷ್ಟ ಜಾತಿಯ ಉಪ ಪಂಗಡಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವ ಸಲುವಾಗಿ ನ್ಯಾ.ನಾಗಮೋಹನದಾಸ್‌ ನೇತೃತ್ವದ ಆಯೋಗವು ಮೂಲ ಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಿಸುತ್ತಿದೆ.

ಸಮೀಕ್ಷಾ ವರದಿ ಜಾರಿ ಆಗುವವರೆಗೂ ರಾಜ್ಯದಲ್ಲಿ ಹೊಸ ನೇಮಕಾತಿಗಳಿಗೆ ಯಾವುದೇ ಅಧಿಸೂಚನೆ ಹೊರಡಿಸದಂತೆ ಸರ್ಕಾರ ಆದೇಶಿಸಿದೆ. ಆದರೆ, ಒಳ ಮೀಸಲಾತಿ ಕುರಿತ ವರದಿ ಜಾರಿಗೆ ರಾಜ್ಯ ಸರ್ಕಾರ ದಿನಾಂಕ ನಿಗದಿಪಡಿಸದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿರುವ ಇತರೆ ಸಮುದಾಯಗಳ ಆಕಾಂಕ್ಷಿತರ ಮೊಗದಲ್ಲಿ ನಿರಾಸೆಯ ಕಾರ್ಮೋಡ ನಿರಾಸೆ ಕವಿದಿದೆ.  

ಮತ್ತೊಂದೆಡೆ ನೇಮಕಾತಿ ಅಧಿಸೂಚನೆಗಾಗಿ ಕೆಪಿಎಸ್‌ಸಿ, ಕೆಇಎ ಮುಂದೆ ವಿವಿಧ ಇಲಾಖೆಗಳು ಸರದಿಯಲ್ಲಿ ನಿಂತಿವೆ. ಪೊಲೀಸ್‌ ಇಲಾಖೆ ಕೂಡ ಒಳಮೀಸಲಾತಿ ವರದಿ ಜಾರಿಯಾಗುವುದನ್ನೇ ಎದುರು ನೋಡುತ್ತಿದೆ.

ಒಳಮೀಸಲು ಜಾರಿಯಾಗುವವರೆಗೂ ನೇಮಕ ಬೇಡ

ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರ್ಕಾರ ಯಾವುದೇ ಹುದ್ದೆಗಳಿಗೆ ಹೊಸ ಅಧಿಸೂಚನೆ, ಬ್ಯಾಕ್‌ಲಾಗ್‌ ಹುದ್ದೆಗಳು ಹಾಗೂ ನೌಕರರ ಮುಂಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಸರ್ಕಾರ ಅದೇಶಿಸಿದೆ.

ಪರಿಶಿಷ್ಟ ಜಾತಿಯ ಉಪ ಪಂಗಡಗಳಿಗೆ  ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸದಂತೆ ದಲಿತ ಸಂಘಟನೆಗಳು, ಹೋರಾಟಗಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು.

ನ್ಯಾ. ನಾಗಮೋಹನ್ ದಾಸ್ ಅವರು ಒಳ ಮೀಸಲಾತಿ ಸಮೀಕ್ಷೆ ಆರಂಭಿಸಿದ ನಂತರವೂ ಕೆಲ ಇಲಾಖೆ ಹಾಗೂ ನಿಗಮಗಳು ನೇಮಕಾತಿ ಅಧಿಸೂಚನೆ ಹೊರಡಿಸಿದ್ದವು. ಆಗ ಮಾಜಿ ಸಚಿವ ಎಚ್‌. ಆಂಜನೇಯ, ಹೋರಾಟಗಾರರಾದ ಮಾವಳ್ಳಿ ಶಂಕರ್‌, ಭಾನುಪ್ರಸಾದ್‌ ಸೇರಿದಂತೆ ಹಲವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಮನವಿ ಬಳಿಕ ಒಳ ಮೀಸಲಾತಿ ವರದಿ ಜಾರಿಯಾಗುವವರೆಗೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸದಂತೆ ಆದೇಶ ಹೊರಡಿಸಿತ್ತು.

ಆತಂಕದಲ್ಲಿ ಅಭ್ಯರ್ಥಿಗಳು

ಸರ್ಕಾರಿ ನೌಕರಿ ಪಡೆಯಬೇಕೆಂಬ ಕನಸು ಹೊತ್ತಿರುವ ಇತರೆ ವರ್ಗಗಳ ವಿದ್ಯಾರ್ಥಿಗಳು ಹಾಗೂ ವಯೋಮಿತಿಯ ಅಂಚಿನಲ್ಲಿರುವರಿಗೆ ಒಳ ಮೀಸಲಾತಿ ಸಮೀಕ್ಷೆಯೇ ಆತಂಕಕ್ಕೆ ದೂಡಿದೆ.

ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ಆಯೋಗ ರಚಿಸಿರುವುದು ಸರಿಯಷ್ಟೇ. ಆದರೆ ಆಯೋಗವು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲು ಎಷ್ಟು ಸಮಯ ತೆಗೆದುಕೊಳ್ಳಲಿದೆ, ಆ ವರದಿಯನ್ನು ಸರ್ಕಾರ ಯಾವಾಗ ಜಾರಿ ಮಾಡಲಿದೆಯೇ, ವಯೋಮಿತಿ ದಾಟಿದರೆ ಸರ್ಕಾರಿ ಉದ್ಯೋಗ ಕನಸಾಗಿಯೇ ಉಳಿಯುವುದೇ ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿದೆ.

ರಾಜ್ಯದಲ್ಲಿ ಲಕ್ಷಾಂತರ ಯುವಕರು ಬೆಂಗಳೂರು, ಧಾರವಾಢ, ಬೆಳಗಾವಿ, ಕಲಬುರಗಿ, ತುಮಕೂರು ಸೇರಿದಂತೆ ವಿವಿದೆಡೆ ಕೋಚಿಂಗ್ ಸೆಂಟರ್ ಗಳಲ್ಲಿ ಪರೀಕ್ಷೆ ತಯಾರಿ ನಡೆಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಸಂಪಾದಿಸಲೇಬೇಕೆಂದು ಹಠ ತೊಟ್ಟು ಗ್ರಂಥಾಲಯಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಪರೀಕ್ಷೆ ತಯಾರಿ ನಡೆಸುತ್ತಿರುವ ಹಲವು ವಿದ್ಯಾರ್ಥಿಗಳು ವಯೋಮಿತಿ ಮೀರುವ ಭೀತಿಯಲ್ಲಿದ್ದರೆ, ಆರ್ಥಿಕ ಸಂಕಷ್ಟಗಳಲ್ಲಿ ಸಿಲುಕಿದ ಕೆಲವರು ನೇಮಕಾತಿ ಅಧಿಸೂಚನೆ ಯಾವಾಗ ಹೊರಡಿಸುತ್ತಾರೆ ಎಂಬುದನ್ನು ಆಸೆ ಕಂಗಳಿಂದ ನೋಡುತ್ತಿದ್ದಾರೆ.

ಈ ಮಧ್ಯೆ ನೌಕರರ ಮುಂಬಡ್ತಿ, ಬ್ಯಾಕ್‌ಲಾಗ್‌ ಸೇರಿದಂತೆ ಯಾವುದಕ್ಕೂ ಅಧಿಸೂಚನೆ ಹೊರಡಿಸಬಾರದು ಎಂದು ಸರ್ಕಾರ ಆದೇಶಿಸಿರುವುದು ಹಲವರನ್ನು ಚಿಂತೆಗೀಡು ಮಾಡಿದೆ.

ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗಳ ಉಪಜಾತಿಗಳಿಗೆ ಮೀಸಲಾತಿ ನೀಡುವುದು ನ್ಯಾಯ. ಆದರೆ ಉಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಸರ್ಕಾರಿ ನೌಕರಿ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಉದ್ಯೋಗ ಪಡೆಯುವ ಕೊನೆಯ ಪ್ರಯತ್ನ

ಸರ್ಕಾರಿ ಹುದ್ದೆಗಳಿಗೆ ವಯೋಮಿತಿ ನಿಗದಿಪಡಿಸಲಾಗಿದೆ. ಬಹಳಷ್ಟು ಆಕಾಂಕ್ಷಿಗಳು ವಯೋಮಿತಿ ಅಂಚಿನಲ್ಲಿದ್ದು, ಸರ್ಕಾರಿ ಉದ್ಯೋಗ ಪಡೆಯುವ ಕೊನೆಯ ಪ್ರಯತ್ನದಲ್ಲಿ ಅಧ್ಯಯನ ನಿರತರಾಗಿದ್ದಾರೆ.

ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಹಿಂದುಳಿದ ವರ್ಗಗಳಿಗೆ(ಒಬಿಸಿ) 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1ರ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಪರಿಶಿಷ್ಟ ಜಾತಿಯ ಉಪಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿ ವರದಿ ಸಲ್ಲಿಸಲು ಹಾಗೂ ವರದಿ ಜಾರಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ವಯೋಮಿತಿ ಮೀರುವ ಅಭ್ಯರ್ಥಿಗಳು ಚಿಂತೆಗೀಡಾಗಿದ್ದಾರೆ.

ವಯೋಮಿತಿ ಹೆಚ್ಚಳ ಮಾಡಿದ್ದ ಸರ್ಕಾರ

ಕೋವಿಡ್‌ ಸಂದರ್ಭದಲ್ಲಿ ಯಾವುದೇ ನೇಮಕಾತಿಗಳು ಸಂಪೂರ್ಣ ಸ್ಥಗಿತವಾಗಿದ್ದವು. ಆದ್ದರಿಂದ ರಾಜ್ಯ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯೋಮಿತಿಯನ್ನು ಮೂರು ವರ್ಷ ಹೆಚ್ಚಳ ಮಾಡಿ ಆದೇಶಿಸಿತ್ತು. 

ಒಂದು ಬಾರಿ ವಯೋಮಿತಿ ಹೆಚ್ಚಳದ ಅವಧಿ ಮುಕ್ತಾಯವಾಗಿರುವುದರಿಂದ ವಯೋಮಿತಿ ನಿಯಮ ಯಥಾಸ್ಥಿತಿಗೆ ಬಂದಿದೆ.

ಕೋವಿಡ್ ಅವಧಿಯಲ್ಲಿ ನೇಮಕಾತಿ ನಡೆಯದ ಕಾರಣ ವಯೋಮಿತಿ ಹೆಚ್ಚಳ ಮಾಡುವಂತೆ ವಿದ್ಯಾರ್ಥಿ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದವು. ಸಮಸ್ಯೆ ಆಲಿಸಿದ್ದ ಸರ್ಕಾರ ಒಂದು ಬಾರಿಗೆ ಮಾತ್ರ ವಯೋಮಿತಿ ಹೆಚ್ಚಿಸಿತ್ತು.

ಒಳಮೀಸಲಾತಿ ಸಮೀಕ್ಷೆಗೆ ಸಮಸ್ಯೆ 

ಮೇ 5 ರಿಂದ ಆರಂಭವಾಗಿರುವ ಒಳಮೀಸಲಾತಿ ಸಮೀಕ್ಷೆಗೆ ಆರಂಭದಲ್ಲೇ ವಿಘ್ನ ಎದರುರಾಗಿತ್ತು. ಎಪಿಕೆ ತಂತ್ರಾಂಶದಲ್ಲಿ ಸರ್ವರ್‌ ಸಮಸ್ಯೆ, ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಗಣತಿದಾರರು ಬೇಸರ ಹೋರಹಾಕಿದ್ದರು. ಇದರಿಂದ ಸಮೀಕ್ಷೆ ಅವಧಿಯನ್ನು ಸರ್ಕಾರ ಒಂದು ವಾರ ವಿಸ್ತರಿಸಿದೆ.

ಮೂರನೇ ಹಂತದ ಸಮೀಕ್ಷೆ ನಡೆಯುತ್ತಿದ್ದು, ಮೇ 28ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ದತ್ತಾಂಶ ವಿಶ್ಲೇಷಣೆ, ವರ್ಗಿಕರಣ ನಡೆಯಲಿದೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ.

ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು 'ದ ಫೆಡರಲ್ ಕರ್ನಾಟಕ' ದ ಜತೆ ಮಾತನಾಡಿ, "ಒಳಮೀಸಲಾತಿ ದತ್ತಾಂಶ ಸಂಗ್ರಹಣೆ ನಡೆಯುತ್ತಿದೆ. ರಾಜ್ಯದಲ್ಲಿ ನೇಮಕಾತಿ ಅಧಿಸೂಚನೆಗಳು ಹೊರಡಿಸುತ್ತಿಲ್ಲ ಎಂದು ಅನ್ಯ ವಿದ್ಯಾರ್ಥಿಗಳು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಆದಷ್ಟು ಬೇಗ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಸೂಚನೆ ಹೊರಡಿಸಿ ನಂತರ ಮೀಸಲು ನೀಡಲಿ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಯ ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿದರೂ ವರದಿ ಅನುಷ್ಠಾನಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. ಅಲ್ಲಿಯವರೆಗೂ ನಗರದ ಖಾಸಗಿ ಗ್ರಂಥಾಲಯಗಳಿಗೆ ಶುಲ್ಕ ಕಟ್ಟಿ ಓದಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನಂತರ ಮೀಸಲು ನೀಡಬೇಕು ಎಂದು ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಹನುಮಂತ ರಾಜು ಆರ್. 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಈ ಮೊದಲು ವಿವಿಧ ಕಾರಣಗಳಿಂದ ಅಧಿಸೂಚನೆ ಹೊರಡಿಸಲು ವರ್ಷಗಳೇ ಬೇಕಾಗುತ್ತಿತ್ತು. ಈಗ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಲು ಮತ್ತೆಷ್ಟು ವರ್ಷಗಳು ಬೇಕಾಗುತ್ತದೆ ಎಂಬುದು ಗೊತ್ತಿಲ್ಲ. ಆದ್ದರಿಂದ ಒಳಮೀಸಲಾತಿ ಒಳಗೊಂಡ ಷರತ್ತು ಬದ್ಧ ಅಧಿಸೂಚನೆ ಹಾಗೂ ಪರೀಕ್ಷಾ ಕಾರ್ಯಗಳು ನಡೆಯಲಿ ಎಂದು ವಿದ್ಯಾರ್ಥಿಗಳ ಸಂಘಟನೆಗಳು ಒತ್ತಾಯಿಸಿವೆ.

ಲಕ್ಷಾಂತರ ವಿದ್ಯಾರ್ಥಿಗಳು ರಾಜ್ಯಾದ್ಯಂತ ಬಡತನ, ಆರ್ಥಿಕ ಸಂಕಷ್ಟ, ವಯೋಮಿತಿ ಮೀರುವ ಆತಂಕದಲ್ಲಿ ಓದುತ್ತಿದ್ದಾರೆ. ಒಳಮೀಸಲಾತಿ ನೆಪದಲ್ಲಿ ಮತ್ತಷ್ಟು ಸಮಯ ವ್ಯರ್ಥಮಾಡದೆ ಸರ್ಕಾರ ಶೀಘ್ರವೇ ಮೀಸಲಾತಿ ಅಂಗೀಕರಿಸಿ ಅಧಿಸೂಚನೆ ಹೊರಡಿಸಬೇಕು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧಿಸೂಚನೆಗೆ ಸಿದ್ಧವಿರುವ ಹುದ್ದೆಗಳು

ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಹಲವು ಇಲಾಖೆಗಳು ತುದಿಗಾಲಲ್ಲಿ ನಿಂತಿವೆ.

ಪದವಿ ಪೂರ್ವ ಕಾಲೇಜಿನ 804 ಉಪನ್ಯಾಸಕ ಹುದ್ದೆಗಳು, 2000 ತಾಂತ್ರಿಕ ಕಾಲೇಜಿನ ಉಪನ್ಯಾಸಕ ಹುದ್ದೆಗಳು, ವಸತಿ ಶಾಲೆಯಲ್ಲಿ 875 ಹುದ್ದೆಗಳು, ಅಬಕಾರಿ ಇಲಾಖೆಯ 268 ಉಪ ನಿರೀಕ್ಷಕರು, 677 ಅಬಕಾರಿ ಪೇದೆ, 16000 ಶಿಕ್ಷಕರು, 600 ಪೊಲೀಸ್ ಇನ್ಸ್ಪೆಕ್ಟರ್, 4000ಕ್ಕೂ ಹೆಚ್ಚು ಪೊಲೀಸ್ ಪೇದೆ, ವಿವಿಧ ಇಲಾಖೆಗಳಲ್ಲಿ 1000ಕ್ಕೂ ಹೆಚ್ಚು ಎಫ್ ಡಿಎ ಹಾಗೂ ಎಸ್ ಡಿಎ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು ಅಧಿಸೂಚನೆಗೆ ಸಿದ್ದವಾಗಿವೆ. ಆದರೆ 25000ಕ್ಕೂ ಅಧಿಕ ಹುದ್ದೆಗಳು ಮೀಸಲಾತಿಯಿಂದಾಗಿ ವಿಳಂಬವಾಗಿವೆ.

ಪರಿಶಿಷ್ಟ ಜಾತಿಯ ಒಳಪಂಗಡಗಳಿಗೆ ಮೀಸಲಾತಿ ನೀಡುವ ಸಂಬಂಧ ಅಧ್ಯಯನ ನಡೆಸಿ 2 ತಿಂಗಳಲ್ಲಿ ವರದಿ ನೀಡುವಂತೆ ಕಳೆದ ನವೆಂಬರ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಜನವರಿ ಅಂತ್ಯದ ವೇಳೆಗೆ ಆಯೋಗವು, ತನ್ನ ಮಧ್ಯಂತರ ವರದಿ ಸಲ್ಲಿಸಿ, ವೈಜ್ಞಾನಿಕ ದತ್ತಾಂಶದ ಸಂಗ್ರಹಕ್ಕೆ ಹೊಸದಾಗಿ ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ ಎಂದು ಶಿಫಾರಸು ಮಾಡಿತು. ಆಗ ಸರ್ಕಾರವು ದತ್ತಾಂಶ ಸಂಗ್ರಹದ ಸಮೀಕ್ಷೆಯ ಹೊಣೆಯನ್ನು ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ನೀಡಿ 60 ದಿನಗಳಲ್ಲಿ ವರದಿ ನೀಡಲು ಮನವಿ ಮಾಡಿತ್ತು.

Tags:    

Similar News