ವ್ಯವಸ್ಥೆಯ ವೈಫಲ್ಯ; 3 ವರ್ಷದಲ್ಲಿ 6 ಬಲಿ ; ಸ್ಪರ್ಧಾರ್ಥಿಗಳ ಆತ್ಮಹತ್ಯೆಗೆ ಹೊಣೆ ಯಾರು?
ಇತ್ತೀಚೆಗಷ್ಟೆ ಧಾರವಾಡದ ಹನುಮಂತನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಗಲಕೋಟೆಯ ಯುವಕನೊಬ್ಬ ತನ್ನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಸೋಮವಾರ(ಸೆ.8) ಮತ್ತೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.;
ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಧಿಕಾರಿಯಾಗಿ ನೇಮಕವಾಗಿ ರಾಜ್ಯದಲ್ಲಿ ಸೇವೆ ಮಾಡಬೇಕು ಎಂಬ ಕನಸು ಕಂಡಿದ್ದ ಯುವಕನೊಬ್ಬ ಕಳೆದ ಸೋಮವಾರ(ಸೆ.9) ಆತ್ಮಹತ್ಯೆಗೆ ಶರಣಗಿರುವುದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಜೀವನದ ಕಟು ವಾಸ್ತವವನ್ನು ಬಹಿರಂಗ ಮಾಡಿದೆ.
ಇದು ಕೇವಲ ಒಬ್ಬ ಸ್ಪರ್ಧಾರ್ಥಿಯ ಜೀವನದ ಕತೆಯಲ್ಲ. ಸರ್ಕಾರಿ ಕೆಲಸ ಪಡೆಯಲೇ ಬೇಕು ಎಂಬ ಆಶಯದೊಂದಿಗೆ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಸ್ಪರ್ಧಾರ್ಥಿಗಳೂ ತಮ್ಮ ಸ್ವಗ್ರಾಮಗಳನ್ನು ಬಿಟ್ಟು ಬೆಂಗಳೂರು, ಧಾರವಾಡ, ವಿಜಯಪುರ, ಕಲಬುರಗಿ, ತುಮಕೂರು ಸೇರಿದಂತೆ ನಾನಾ ನಗರಗಳ ಗ್ರಂಥಾಲಯಗಳಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರ ಜೀವನದ ಕತೆಯಾಗಿದೆ.
ಇತ್ತೀಚೆಗಷ್ಟೆ ಧಾರವಾಡದ ಹನುಮಂತನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಗಲಕೋಟೆಯ ಯುವಕನೊಬ್ಬ ತನ್ನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಸೋಮವಾರ ರಾತ್ರಿ ಮತ್ತೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡೊರುವುದಕ್ಕೆ ಸರ್ಕಾರ ಹಾಗೂ ನೇಮಕಾತಿ ಪ್ರಾಧಿಕಾರಗಳು ಪರೀಕ್ಷಾ ಪ್ರಕ್ರಿಯೆಯಲ್ಲಿ ಅನುಸರಿಸುವ ವಿಳಂಬ ದೋರಣೆಯೇ ಪ್ರಮುಖ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ʼಅತ್ಮವಿಶ್ವಾಸʼದ ಶಿಕ್ಷಣ ಅಗತ್ಯ
ಮ್ಯಾಥ್ಸ್ ಗುರು ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಗುರುರಾಜ್ ಬುಲ್‌ಬುಲೆ ʼದ ಫೆಡರಲ್ ಕರ್ನಾಟಕʼ ದ ಜೊತೆ ಮಾತನಾಡಿ, " ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಶಿಕ್ಷಣ ಪದ್ದತಿ ಇಂದಿನ ಪೀಳಿಗೆಗೆ ಅಗತ್ಯವಿದೆ. ಸ್ಪರ್ಧಾ ಜಗತ್ತಿಗೆ ಬರುವ ವಿದ್ಯಾರ್ಥಿಗಳು ಸರ್ಕಾರಿ ನೌಕರಿಯೇ ಯಶಸ್ವಿ ಜೀವನಕ್ಕೆ ದಾರಿ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದು ಆತನ ಕುಟುಂಬಕ್ಕೆ ಮಾತ್ರ ಆದ ನಷ್ಟವಲ್ಲ ಬದಲಾಗಿ ಇಡೀ ಸಮಾಜಕ್ಕೆ ಆದ ನಷ್ಟ ಎಂಬುದನ್ನು ಮರೆಯಬಾರದು. ಸರ್ಕಾರಿ ನೌಕರಿ ಸಿಗದಿದ್ದರೆ ನಾವೇ ಮತ್ತೊಬ್ಬರಿಗೆ ನೌಕರಿ ಕೊಡುವಂತಾಗಬೇಕು. ವಿದ್ಯಾರ್ಥಿಗಳು ಆತುರದ ನಿರ್ಧಾರ ಮಾಡದೆ ಸಾಧ್ಯವಾದಷ್ಟು ಪ್ರಯತ್ನ ಪಡಬೇಕು. ಪರೀಕ್ಷೆಯಲ್ಲಿ ಯಶಸ್ಸು ಸಿಗದಿದ್ದರೆ ಬದುಕಲು ಸಾವಿರಾರು ದಾರಿಗಳಿವೆ" ಎಂದರು.
ವ್ಯವಸ್ಥೆಯ ವೈಪಲ್ಯವೇ ಅವಘಡಗಳಿಗೆ ಕಾರಣ
ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ (ಅಕ್ಸರ) ಸಂಘಟನೆಯ ರಾಜ್ಯಾಧ್ಯಕ್ಷ ಸಂತೋಷ್ ಮರೂರ್ ಅವರು 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿ ದುರಂತದ ಹಿಂದಿನ ವ್ಯವಸ್ಥೆಯ ವೈಫಲ್ಯಗಳನ್ನು ಕಟುವಾಗಿ ಟೀಕಿಸಿದ್ದಾರೆ. "ವರ್ಷಗಟ್ಟಲೆ ಪರೀಕ್ಷೆಗೆ ಸಿದ್ಧತೆ ನಡೆಸಿದ ಅಭ್ಯರ್ಥಿಗಳು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಾರೆ. ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಹೇರುತ್ತಿರುವ ಅಗಾಧವಾದ ಶೈಕ್ಷಣಿಕ ಒತ್ತಡ, ಅಂಕಗಳಿಕೆಯೊಂದೇ ಶಿಕ್ಷಣದ ಗುರಿ ಎಂಬಂತೆ ಬಿಂಬಿಸುತ್ತಿರುವುದು ವಿದ್ಯಾರ್ಥಿಗಳ ಸಹಜ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ಕಡೆಗಣಿಸುತ್ತಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ದೊಡ್ಡ ದುರಂತ. ಖಿನ್ನತೆ, ಆತಂಕದಂತಹ ಗಂಭೀರ ಸಮಸ್ಯೆಗಳಿಗೆ ಒಳಗಾದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಸಲಹೆ ಮತ್ತು ಬೆಂಬಲ ಸಿಗುತ್ತಿಲ್ಲ ಎಂದು ಹೇಳಿರುವ ಅವರು, "ಮಾನಸಿಕ ಆರೋಗ್ಯವನ್ನು ಒಂದು ಕಳಂಕವೆಂದು ನೋಡುವ ಸಾಮಾಜಿಕ ಮನಸ್ಥಿತಿಯೂ ಇದಕ್ಕೆ ಪ್ರಮುಖ ಕಾರಣ. ಇದರ ಜೊತೆಗೆ, ಶಿಕ್ಷಣ ಮತ್ತು ಪರೀಕ್ಷಾ ತಯಾರಿಗಾಗಿ ಮಾಡುವ ಲಕ್ಷಾಂತರ ರೂಪಾಯಿಗಳ ಖರ್ಚು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಅಪಾರವಾದ ಆರ್ಥಿಕ ಹೊರೆಯನ್ನು ಹೇರುತ್ತಿದೆ. ಉದ್ಯೋಗ ಸಿಗದೆ ಹೋದರೆ ಕುಟುಂಬವನ್ನು ಹೇಗೆ ನಿರ್ವಹಿಸುವುದು ಎಂಬ ಆತಂಕ, ಯುವಜನರನ್ನು ಹತಾಶೆಯ ಕೂಪಕ್ಕೆ ತಳ್ಳುತ್ತಿದೆ," ಎಂದು ಸಂತೋಷ್ ಮರೂರ್ ವಿವರಿಸುತ್ತಾರೆ.
ಸರ್ಕಾರಕ್ಕೆ ವಿದ್ಯಾರ್ಥಿ ಸಂಘಟನೆಗಳ ಬೇಡಿಕೆ ಏನು ?
ಎಲ್ಲಾ ನೇಮಕ ಸಂಸ್ಥೆಗಳಲ್ಲಿ ಮತ್ತು ಇಲಾಖೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಸಮಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕು. ಪರೀಕ್ಷೆಗಳನ್ನು ನಿಗದಿತ ಸಮಯದಲ್ಲಿ ನಡೆಸಿ, ತ್ವರಿತವಾಗಿ ಫಲಿತಾಂಶಗಳನ್ನು ಪ್ರಕಟಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನುಗಳನ್ನು ರೂಪಿಸಬೇಕು. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಕಡ್ಡಾಯ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಬೇಕು. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಸಹಾಯವಾಣಿಗಳನ್ನು ಸ್ಥಾಪಿಸಬೇಕು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳ ಕುಟುಂಬಗಳಿಗೆ ಸರ್ಕಾರವು ತಕ್ಷಣವೇ ಸೂಕ್ತ ಪರಿಹಾರವನ್ನು ಘೋಷಿಸಬೇಕು ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
ಇದು ನಮ್ಮ ಯುವ ಪೀಳಿಗೆಯ ಭವಿಷ್ಯದ ಪ್ರಶ್ನೆಯಾಗಿದೆ. ಸರ್ಕಾರವು ಈ ವಿಷಯವನ್ನು ಕೇವಲ ಅಂಕಿ-ಅಂಶಗಳೆಂದು ಪರಿಗಣಿಸದೆ, ರಾಜ್ಯದ ಭವಿಷ್ಯದ ಮೇಲಿನ ಗಂಭೀರ ಪ್ರಹಾರವೆಂದು ಭಾವಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದು ನಾವು ಒತ್ತಾಯಿಸುತ್ತೇವೆ. ವಿದ್ಯಾರ್ಥಿಗಳ ಮತ್ತು ಆಕಾಂಕ್ಷಿಗಳ ಹಕ್ಕುಗಳಿಗಾಗಿ ನಿರಂತರವಾಗಿ ʼಅಕ್ಸರʼ ಸಂಘಟನೆ ಹೋರಾಡಲಿದೆ ಎಂದು ತಿಳಿಸಿದೆ.
ಉದ್ಯೋಗವೇ ಜೀವನವಲ್ಲ
"ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾರ್ಥಿಗಳು, ಯಾವುದೇ ಹಂತದಲ್ಲೂ ಧೃತಿಗೆಡಬಾರದು. ಉದ್ಯೋಗ ಎಂಬುದು ಜೀವನದ ಒಂದು ಭಾಗವೇ ಹೊರತು, ಅದೇ ಸಂಪೂರ್ಣ ಜೀವನವಲ್ಲ. ಒಂದು ನಿರ್ದಿಷ್ಟ ಹಂತದವರೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ಪರೀಕ್ಷೆಗಳನ್ನು ಎದುರಿಸಬೇಕು. ಒಂದು ವೇಳೆ ಯಶಸ್ಸು ಸಿಗದಿದ್ದರೂ, ನಿರಾಶರಾಗದೆ, ತಮ್ಮಲ್ಲಿರುವ ಇತರ ಕೌಶಲ್ಯಗಳಿಗೆ ಅನುಗುಣವಾಗಿ ಬೇರೆ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕಂಡುಕೊಳ್ಳುವುದು ಜಾಣತನ. ನಮ್ಮನ್ನು ನಂಬಿ ನಮ್ಮ ತಂದೆ-ತಾಯಿ ಮತ್ತು ಇಡೀ ಕುಟುಂಬವೇ ಇರುತ್ತದೆ ಎಂಬುದನ್ನು ಮರೆಯಬಾರದು. ಈ ಎಲ್ಲವನ್ನೂ ಮರೆತು ಆತ್ಮಹತ್ಯೆಯಂತಹ ಕಠೋರ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ," ಎಂದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಚಿಕ್ಕಮಗಳೂರಿನ ದರ್ಶನ್ ಈ.ಜೆ. ಅವರು ಅಭಿಪ್ರಾಯಪಟ್ಟರು.
ಮೂರು ವರ್ಷಗಳಲ್ಲಿ ಆರು ಸ್ಪರ್ಧಾರ್ಥಿಗಳು ಆತ್ಮಹತ್ಯೆ
ರಾಜ್ಯದಲ್ಲಿ 2022 ರಿಂದ 2025 ಸೆಪ್ಟಂಬರ್ 8 ರವರೆಗೂ ಆರು ಸ್ಪರ್ಧಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022 ಮೇ ನಲ್ಲಿ ಗೋವಿಂದರಾಜ ನಗರದಲ್ಲಿ ಸ್ಪರ್ಧಾರ್ಥಿ ಪವಿತ್ರ ಹಾಗೂ ವಿಜಯನಗರದಲ್ಲಿ ಗೀತಾ ಹೆಗ್ಗಣ್ಣನವರ್(22) ಆತ್ಮಹತ್ಯೆ ಮಾಡಿಕೊಂಡಿದ್ದರು. 2023 ಮೇ ನಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿಯಾಗುತ್ತಿದ್ದ ಸ್ಪರ್ಧಾರ್ಥಿಯೊಬ್ಬರು ವಿಜಯನಗರದಲ್ಲಿ ಹಾಗೂ ಬೀದರ್ ಮೂಲದ ಅಭಿಷೇಕ್ (19) ಎಂಬ ವಿದ್ಯಾರ್ಥಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2025 ರಲ್ಲಿ ಧಾರವಾಡದ ಹನುಮಂತನಗರದಲ್ಲಿ ಗ್ರೂಪ್ ʼಸಿʼ ಪರೀಕ್ಷೆಗೆ ಕಳೆದ ನಾಲ್ಕು ವರ್ಷದಿಂದ ತಯಾರಾಗುತ್ತಿದ್ದ ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬ ತಾನಿದ್ದ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಸೋಮವಾರ(ಸೆ.8) ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳಲ್ಲಿನ ಮನೋಬಲ ಕುಸಿಯುವಂತೆ ಮಾಡಿದೆ.
ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ತರಬೇತಿ ಪಡೆದು ಪ್ರಯತ್ನ ಮಾಡುವುದು ತಪ್ಪಲ್ಲ. ಒಂದೆರೆಡು ಪರೀಕ್ಷೆಗಳಲ್ಲಿ ವಿಫಲವಾದರೆ, ಐದಾರು ವರ್ಷ ಯಶಸ್ಸು ಸಿಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಎಲ್ಲರಿಗೂ ತಮ್ಮದೇ ಸಾಮರ್ಥ್ಯ ಹಾಗೂ ಕೌಶಲ್ಯವಿದ್ದು, ಸ್ವಂತ ಪರಿಶ್ರಮದಿಂದ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಯುವ ಜನತೆ ಆತ್ಮವಿಶ್ವಾಸ ಕಳೆದುಕೊಂಡು ಆತ್ಮಹತ್ಯೆ ದಾರಿ ತುಳಿಯಬಾರದು ಎಂಬುದು ʼದ ಫೆಡರಲ್ ಕರ್ನಾಟಕʼದ ಕಳಕಳಿಯಾಗಿದೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)