Karnataka By-Election | ಶಿಗ್ಗಾವಿ ಅಭ್ಯರ್ಥಿ ಅಜ್ಜಂಪೀರ್ ಗೃಹಬಂಧನ?

ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಲು ಅಜ್ಜಂಪೀರ್ ಖಾದ್ರಿ ಅವರನ್ನು ಅ.26 ರಂದು ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಮಾತುಕತೆ ನಡೆಸಿ, ಮನವೊಲಿಸಿದ್ದರು.

Update: 2024-10-29 13:10 GMT

ಶಿಗ್ಗಾವಿ ಉಪಚುನಾವಣೆ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ಇನ್ನೂ ಶಮನವಾಗಿಲ್ಲ. ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸೈಯದ್ ಅಜ್ಜಂಪೀರ್ ಖಾದ್ರಿ ಅವರನ್ನು ಮೂರು ದಿನಗಳಿಂದ ಕ್ಷೇತ್ರಕ್ಕೆ ಕಳುಹಿಸದೇ ಹಿಡಿದಿಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರ ಕ್ರಮಕ್ಕೆ ಖಾದ್ರಿ ಅವರು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಲು ಅಜ್ಜಂಪೀರ್ ಖಾದ್ರಿ ಅವರನ್ನು ಅ.26 ರಂದು ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಮಾತುಕತೆ ನಡೆಸಿ, ಮನವೊಲಿಸಿದ್ದರು.

ಇದಾದ ಬಳಿಕ ಅಜ್ಜಂಪೀರ್ ಖಾದ್ರಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಕಣ್ಗಾವಲಿನಲ್ಲಿ ಅವರ ಮನೆಯಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಖಾದ್ರಿ ಅವರೇ ತಮ್ಮನ್ನು ಜಮೀರ್ ಮನೆಯಲ್ಲಿ ಇರಿಸಿದ್ದು, ಇಬ್ಬರು ಅಂಗರಕ್ಷರನ್ನು ನಿಯೋಜಿಸಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ರಾಜ್ಯ ನಾಯಕರ ಈ ಕ್ರಮದಿಂದ ಅಸಮಾಧಾನಗೊಂಡ ಖಾದ್ರಿ ಬೆಂಬಲಿಗರು ಸೋಮವಾರ ಶಿಗ್ಗಾವಿಯಲ್ಲಿ ಸಭೆ ನಡೆಸಿ ಕೂಡಲೇ ಮಾಜಿ ಶಾಸಕರನ್ನು ಕ್ಷೇತ್ರಕ್ಕೆ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಹುಲಿಯನ್ನು ಬೋನಿನಲ್ಲಿ ಇಡದೆ ಹೊರಬಿಡಿ. ಕ್ಷೇತ್ರದಲ್ಲಿ ಸೈಯದ್ ಅಜ್ಜಂಪೀರ್ ಖಾದ್ರಿ ಅವರ ಶಕ್ತಿ ಏನೆಂಬುದು ತೋರಿಸುತ್ತೇವೆ. ಖಾದ್ರಿ ಅವರ ಹಿಂದೆ ಯಾರೂ ಇಲ್ಲಅಂದುಕೊಳ್ಳಬೇಡಿ. ಅವರ ಶಕ್ತಿಯನ್ನು ಮತ ಹಾಕುವ ಮೂಲಕ ತೋರಿಸುತ್ತೇವೆ ಎಂದು ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೂರು ದಿನಗಳಿಂದ ಖಾದ್ರಿ ಅವರು ಕ್ಷೇತ್ರಕ್ಕೆ ಮರಳದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಆತಂಕಗೊಂಡಿದ್ದಾರೆ. ಅವರು ಪಕ್ಷೇತರರಾಗಿ ಸ್ಪರ್ಧೆ ಎದುರಿಸುವ ಪ್ರಭಾವಿ ಅಭ್ಯರ್ಥಿ. ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲ್ಕಕೆ ಅವಕಾಶ ಮಾಡಿಕೊಡದೇ ಕೂಡಲೇ ಕ್ಷೇತ್ರಕ್ಕೆ ಕಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೆಂಬಲಿಗರು ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಅಜ್ಜಂಪೀರ್ ಖಾದ್ರಿ ಅವರನ್ನು ಚುನಾವಣೆಗೆ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಬೇಕಾಗಿದೆ. ಹಾಗಾಗಿ ಬೇಗ ಕಳುಹಿಸಿಕೊಡಿ ಎಂದು ಖಾದ್ರಿ ಅವರ ಬೆಂಬಲಿಗರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹ್ಮದ್ ಅವರಿಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ ಶಿಗ್ಗಾವಿಯಲ್ಲಿ ಬೆಂಬಲಿಗರ ಆಕ್ರೋಶದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಅವರು ಮಂಗಳವಾರ ಸೈಯದ್ ಅಜ್ಜಂಪೀರ್ ಖಾದ್ರಿ ಅವರನ್ನು ಖುದ್ದು ಶಿಗ್ಗಾವಿಗೆ ಕರೆದೊಯ್ಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅ.30 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಹಾಗಾಗಿ ಖಾದ್ರಿ ಅವರನ್ನು ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯ ನಾಯಕರು ಜಮೀರ್ ಅಹಮದ್ ಅವರಿಗೆ ವಹಿಸಿದ್ದಾರೆ. ಹಾಗಾಗಿ ಸಚಿವರೇ ತಮ್ಮ ರಕ್ಷಣೆಯಲ್ಲಿ ಖಾದ್ರಿ ಅವರನ್ನು ಶಿಗ್ಗಾವಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿವೆ.

ಉಪಚುನಾವಣೆ ಟಿಕೆಟ್ ವಂಚಿತರಾದ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

Tags:    

Similar News