ರಮ್ಯಾ vs ದರ್ಶನ್ ಅಭಿಮಾನಿಗಳ ಕಮೆಂಟ್‌ ವಾರ್‌; ರಮ್ಯಾ ಪರ ನಿಂತ ಶಿವಣ್ಣ ದಂಪತಿ

ನಟಿ ರಮ್ಯಾ ಪರ ನಟ ಶಿವರಾಜ್ ಕುಮಾರ್ ದಂಪತಿ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ರಮ್ಯಾ ವಿರುದ್ದ ಬಳಸಿರುವ ಪದ ಖಂಡನೀಯ ಎಂದು ಹೇಳಿದ್ದಾರೆ.;

Update: 2025-07-29 09:49 GMT

ನಟಿ ರಮ್ಯಾ ಅವರಿಗೆ ಶಿವಣ್ಣ ದಂಪತಿ ಬೆಂಬಲ ನೀಡಿದ್ದಾರೆ. 

ನಟಿ ರಮ್ಯಾ ಮತ್ತು ನಟ ದರ್ಶನ್ ಅಭಿಮಾನಿಗಳ ನಡುವಿನ ಸಾಮಾಜಿಕ ಜಾಲತಾಣದ ಸಮರ ತಾರಕಕ್ಕೇರಿದ್ದು, ರಮ್ಯಾ ಅವರಿಗೆ ಚಿತ್ರರಂಗದಿಂದ ಬಲವಾದ ಬೆಂಬಲ ವ್ಯಕ್ತವಾಗಿದೆ. ನಟ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ರಮ್ಯಾ ಪರ ಬಹಿರಂಗವಾಗಿ ನಿಂತಿದ್ದು, ಅವರ ವಿರುದ್ಧ ಬಳಸಲಾದ ಅವಾಚ್ಯ ಪದಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ನಾವು ಸದಾ ನಿಮ್ಮ ಜೊತೆ ನಿಲ್ಲುತ್ತೇವೆ; ಶಿವಣ್ಣ ದಂಪತಿ

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಶಿವರಾಜ್ ಕುಮಾರ್, "ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಮಹಿಳೆಯರನ್ನು ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ಎಂಬ ಬಲಿಷ್ಠ ಅಸ್ತ್ರವನ್ನು ಏಳಿಗೆಗೆ ಬಳಸಬೇಕೇ ಹೊರತು, ದ್ವೇಷ-ಅಸೂಯೆ ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ," ಎಂದು ಬೆಂಬಲ ಸೂಚಿಸಿದ್ದಾರೆ.

 43 ಖಾತೆಗಳ ವಿರುದ್ಧ ಎಫ್ಐಆರ್

ನಟಿ ರಮ್ಯಾ ಅವರ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ (ಸಿಇಎನ್) ಠಾಣೆಯಲ್ಲಿ ಪ್ರಮೋದ್ ಗೌಡ ಸೇರಿದಂತೆ 43 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಮಹಿಳಾ ಆಯೋಗವೂ ಮಧ್ಯಪ್ರವೇಶಿಸಿದೆ.

ವಿವಾದದ ಹಿನ್ನೆಲೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಟೀಕಿಸಿತ್ತು. ಈ ಬೆಳವಣಿಗೆಯ ನಂತರ ನಟಿ ರಮ್ಯಾ ಅವರು, "ಸುಪ್ರೀಂಕೋರ್ಟ್ ಜನಸಾಮಾನ್ಯರ ಪಾಲಿಗೆ ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ನಿಂದ ಆಕ್ರೋಶಗೊಂಡಿದ್ದ ದರ್ಶನ್ ಅಭಿಮಾನಿಗಳು, ರಮ್ಯಾ ವಿರುದ್ಧ ತೀವ್ರ ನಿಂದನೀಯ ಹಾಗೂ ಅಶ್ಲೀಲ ಕಮೆಂಟ್ಗಳನ್ನು ಹಾಕಲು ಆರಂಭಿಸಿದ್ದರು.

Tags:    

Similar News