ರಾಜ್ಯಸಭಾ ಸಂಸದೆ ಸುಧಾ ಮೂರ್ತಿಗೆ ಸೈಬರ್ ವಂಚಕನಿಂದ ಬೆದರಿಕೆ: ದೂರು ದಾಖಲು
ಸೆಪ್ಟೆಂಬರ್ 5 ರಂದು, ಬೆಳಗ್ಗೆ 9:40 ರ ಸುಮಾರಿಗೆ, ಸುಧಾ ಮೂರ್ತಿ ಅವರಿಗೆ ದೂರಸಂಪರ್ಕ ಸಚಿವಾಲಯದ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯಿಂದ ದೂರವಾಣಿ ಕರೆ ಬಂದಿದೆ.
ಸುಧಾಮೂರ್ತಿ
ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಸೈಬರ್ ವಂಚಕರು ಕರೆ ಮಾಡಿ, ಅವರ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.
ಸೆಪ್ಟೆಂಬರ್ 5 ರಂದು ಬೆಳಗ್ಗೆ 9.40ಕ್ಕೆ ಸುಧಾ ಮೂರ್ತಿ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ದೂರಸಂಪರ್ಕ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. "ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡಲು ಬಳಸಲಾಗುತ್ತಿದೆ. ನಾವು ಹೇಳಿದಂತೆ ಕೇಳದಿದ್ದರೆ, ಮಧ್ಯಾಹ್ನ 12 ಗಂಟೆಯೊಳಗೆ ನಿಮ್ಮ ಸಂಖ್ಯೆಯ ಸಂಪರ್ಕವನ್ನು ಕಡಿತಗೊಳಿಸಲಾಗುವುದು" ಎಂದು ಬೆದರಿಕೆ ಹಾಕಿದ್ದಾನೆ.
ಈ ಕರೆಯನ್ನು ನಂಬಿದ ಸುಧಾ ಮೂರ್ತಿ ಅವರು, 'ಟ್ರೂಕಾಲರ್' ಆ್ಯಪ್‌ನಲ್ಲಿ ಪರಿಶೀಲಿಸಿದಾಗ, ಅದು 'ಟೆಲಿಕಾಂ ಇಲಾಖೆ' ಎಂದೇ ತೋರಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, "ನಿಮ್ಮ ಮೊಬೈಲ್ ಸಂಖ್ಯೆ 2020ರಲ್ಲಿ ನೋಂದಣಿಯಾಗಿದ್ದು, ಇನ್ನೂ ಆಧಾರ್ ಕಾರ್ಡ್‌ಗೆ ಜೋಡಣೆಯಾಗಿಲ್ಲ" ಎಂದು ಹೇಳಿ ವೈಯಕ್ತಿಕ ಮಾಹಿತಿ ಕದಿಯಲು ಯತ್ನಿಸಿದ್ದಾನೆ. ಅಲ್ಲದೆ, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಇದೇ ಸಂಖ್ಯೆಯಿಂದ ಇತರರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುವುದಾಗಿಯೂ ಬೆದರಿಸಿದ್ದಾನೆ.
ಈ ಘಟನೆಯ ಕುರಿತು ಸೆಪ್ಟೆಂಬರ್ 20 ರಂದು ಸುಧಾ ಮೂರ್ತಿ ಅವರ ಪರವಾಗಿ ಬಿ. ಗಣಪತಿ ಎಂಬುವವರು ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಂಚಕನ ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ತಾಂತ್ರಿಕ ವಿವರಗಳನ್ನು ಸಂಗ್ರಹಿಸಿ, ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.