ರಾಜ್ಯಸಭಾ ಚುನಾವಣೆ | ಗೆದ್ದ ಕಾಂಗ್ರೆಸ್ ತಂತ್ರ, ಬಿದ್ದ ಬಿಜೆಪಿ-ಜೆಡಿಎಸ್ ಪ್ರತಿತಂತ್ರ
ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.;
ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.
ರಾಜ್ಯ ವಿಧಾನಸಭಾದಿಂದ ಆಯ್ಕೆ ಆಗಬೇಕಾದ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ಸಿನ ಮೂವರು, ಬಿಜೆಪಿಯ ಒಬ್ಬರು ಮತ್ತು ಜೆಡಿಎಸ್‌ನ ಒಬ್ಬರು ಸೇರಿದಂತೆ ಒಟ್ಟು ಐದು ಮಂದಿ ಕಣದಲ್ಲಿದ್ದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಜಂಟಿಯಾಗಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು.
ಮಂಗಳವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಮತದಾನ ನಡೆದಿದ್ದು, ಸಂಜೆ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಯಿತು.
ಕಾಂಗ್ರೆಸ್ ಅಭ್ಯರ್ಥಿಗಳಾದ ಎಐಸಿಸಿ ಖಜಾಂಚಿ ಅಜಯ್ ಮಾಕೆನ್, ಹಾಲಿ ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ ಅವರು ತಲಾ 47 ಮತ ಪಡೆದರೆ, ಮತ್ತೊಬ್ಬ ಹಾಲಿ ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ 45 ಮತ ಪಡೆದರು.
ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ಮತ್ತು ಪುಟ್ಟಸ್ವಾಮಿ ಗೌಡ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಮತ್ತು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಜೊತೆಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕೂಡ ಅಡ್ಡಮತದಾನದ ಮೂಲಕ ಕಾಂಗ್ರೆಸ್ಸಿನ ಅಜಯ್ ಮಾಕೆನ್ ಅವರಿಗೆ ಮತ ಚಲಾಯಿಸಿದ್ದಾರೆ.
ಗೆಲುವು ಖಾತರಿಪಡಿಸಿಕೊಂಡ ಬಿಜೆಪಿ
ಬಿಜೆಪಿಯ ನಾರಾಯಣ ಸಾ ಭಾಂಡಗೆ ಅವರು 47 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಬಿಜೆಪಿಯ ಒಟ್ಟು ೬೬ ಶಾಸಕರ ಪೈಕಿ ೪೭ ಮಂದಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದರೆ, ೧೪ ಮಂದಿ ಶಾಸಕರು ಮೈತ್ರಿಕೂಟದ ಹೆಚ್ಚುವರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತ ಚಲಾಯಿಸಿದ್ದಾರೆ. ಇನ್ನುಳಿದ ಇಬ್ಬರ ಪೈಕಿ, ಎಸ್ ಟಿ ಸೋಮಶೇಖರ್ ಅಡ್ಡಮತದಾನ ಮಾಡಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರೆ, ಮತ್ತೊಬ್ಬ ಶಾಸಕ ಶಿವರಾಂ ಹೆಬ್ಬಾರ್ ಮತದಾನದಿಂದ ಹೊರಗುಳಿದರು.
ಫಲಿಸದ ಜೆಡಿಎಸ್ ನಿರೀಕ್ಷೆ
ಅಡ್ಡಮತದಾನ ಮತ್ತು ಪಕ್ಷೇತರರ ಮತಗಳ ಮೇಲೆ ಕಣ್ಣಿಟ್ಟು ಜೆಡಿಎಸ್ ಕಣಕ್ಕಿಳಿಸಿದ್ದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಿರೀಕ್ಷೆಯಂತೆ ಸೋಲು ಕಂಡಿದ್ದಾರೆ. ಅವರಿಗೆ ಜೆಡಿಎಸ್ ಪಕ್ಷದ ಎಲ್ಲ ಶಾಸಕರು ಮತ ಹಾಕಿದ್ದು, ಬಿಜೆಪಿಯ ೧೭ ಮತಗಳು ಮಾತ್ರ ಬಂದಿವೆ. ಒಟ್ಟು ೩೬ ಮತ ಪಡೆದ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸೋಲು ಕಂಡರು.
ಅಡ್ಡ ಮತದಾನದ ಭೀತಿ ಎದುರಿಸುತ್ತಿದ್ದ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಗೇ ಮತ ಹಾಕಿದ್ದು ವಿಶೇಷವಾಗಿತ್ತು. ಗುರುಮಠಕಲ್ ಶಾಸಕ ಶರಣ ಗೌಡ ಕುಂದಕೂರ ಅವರು ಪಕ್ಷದ ನಾಯಕರ ವಿರುದ್ಧ ಇತ್ತೀಚಿನ ದಿನಗಳಲ್ಲಿ ತೀವ್ರ ಅಸಮಾಧಾನ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅವರು ಅಡ್ಡಮತದಾನ ಮಾಡಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ, ಅವರು ಸಕಾಲದಲ್ಲಿ ಸ್ವಪಕ್ಷೀಯರಿಗೇ ಮತದಾನ ಮಾಡಿ ಗಮನ ಸೆಳೆದರು.
ವಿಪ್ ಮುರಿದ ಬಿಜೆಪಿ ಶಾಸಕರು!
ಅಡ್ಡ ಮತದಾನ ಮಾಡುವ ನಿರೀಕ್ಷೆ ಇದ್ದ ಬಿಜೆಪಿಯ ಇಬ್ಬರು ಶಾಸಕರ ಪೈಕಿ ಎಸ್ ಟಿ ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೆನ್ ಅವರಿಗೆ ತಮ್ಮ ಮತ ಹಾಕಿದರೆ, ಶಿವರಾಂ ಹೆಬ್ಬಾರ್ ಅವರು ಮತದಾನಕ್ಕೆ ಗೈರು ಹಾಜರಾದರು.
ಹೆಬ್ಬಾರ್ ಮತದಾನ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದರು. ಬಿಜೆಪಿ ನಾಯಕರು ಅವರನ್ನು ಹುಡುಕಲು, ಸಂಪರ್ಕಿಸಲು ನಡೆಸಿದ ಯತ್ನಗಳು ಫಲ ಕೊಡಲಿಲ್ಲ. ಹೆಬ್ಬಾರ್ ಅವರ ಶಾಸಕರ ಭವನದ ಕಚೇರಿ ಮತ್ತು ಅವರ ನಿವಾಸಕ್ಕೆ ವಿಪ್ ಪ್ರತಿ ಅಂಟಿಸಲಾಗಿತ್ತು. ಆದರೂ ಅವರು ಮತದಾನ ಕೇಂದ್ರ ವಿಧಾನಸೌಧದತ್ತ ಸುಳಿಯಲೇ ಇಲ್ಲ!
ಮೈತ್ರಿಕೂಟಕ್ಕೆ ಕೊಟ್ಟ ತಿರುಗೇಟು
ರಾಜ್ಯಸಭಾ ಚುನಾವಣೆಯ ಫಲಿತಾಂಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, "ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡಿರುವ ಅಪವಿತ್ರ ಮೈತ್ರಿಗೆ ಕರ್ನಾಟಕದಲ್ಲಿ ಇದು ಎರಡನೇ ಸೋಲು. ಈ ಮೊದಲು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿತ್ತು. ಅದಾಗಿ ಒಂದೇ ವಾರದಲ್ಲಿ ಇದೀಗ ಎರಡನೇ ಮುಖಭಂಗ ಎದುರಾಗಿದೆ. ರಾಜ್ಯದ ಜನತೆ ಅಪವಿತ್ರ ಮೈತ್ರಿಗೆ ತಕ್ಕ ಉತ್ತರ ನೀಡಿದ್ದಾರೆ” ಎಂದು ಹೇಳಿದರು.