ರಾಜು ಕಾಗೆಯೇ ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷ: 'ಪ್ರಿಂಟ್ ಮಿಸ್ಟೇಕ್' ಗೊಂದಲಕ್ಕೆ ತೆರೆ ಎಳೆದ ಸಿಎಂ

ರಾಜು ಕಾಗೆಯನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿಲ್ಲ ಎಂದು ಸಿಎಂ ತಿಳಿಸಿದ್ದು, ಪ್ರಿಂಟ್​ ಮಿಸ್ಟೆಕ್​ ಆಗಿದೆ. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

Update: 2025-09-26 11:06 GMT

ರಾಜು ಕಾಗೆ

Click the Play button to listen to article

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ವರದಿಗಳಿಂದ ಉಂಟಾಗಿದ್ದ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆ ಎಳೆದಿದ್ದಾರೆ. "ಅದು ಪ್ರಿಂಟ್ ಮಿಸ್ಟೇಕ್‌ನಿಂದಾದ ಗೊಂದಲ. ರಾಜು ಕಾಗೆ ಅವರನ್ನೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಶಾಸಕ ರಾಜು ಕಾಗೆ ಅವರನ್ನು ಎನ್​​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿದೆ ಮತ್ತು ಅವರ ಸ್ಥಾನಕ್ಕೆ ಅರುಣ್ ಪಾಟೀಲ್ ಅವರನ್ನು ನೇಮಿಸಲಾಗಿದೆ ಎಂದು ವರದಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​ ಬಿಹಾರ ಪ್ರವಾಸದಲ್ಲಿದ್ದಾಗ, ಎಐಸಿಸಿ ರಾಜ್ಯದ 39 ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷರಾಗಿ ಅರುಣ್ ಪಾಟೀಲ್ ಅವರ ಹೆಸರು ಉಲ್ಲೇಖವಾಗಿದ್ದೇ ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿತ್ತು.

ತಮ್ಮ ಕ್ಷೇತ್ರದ ಅನುದಾನ ಬಿಡುಗಡೆಯ ವಿಳಂಬದ ಬಗ್ಗೆ ರಾಜು ಕಾಗೆ ಅವರು "ಸಮಸ್ಯೆ ಬಗೆಹರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ, ಅವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು.

ಸಿಎಂ ಭೇಟಿ, ಗೊಂದಲ ನಿವಾರಣೆ

ಈ ಗೊಂದಲದ ಬಗ್ಗೆ ಸ್ಪಷ್ಟನೆ ಪಡೆಯಲು ರಾಜು ಕಾಗೆ ಅವರು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ವೇಳೆ, "ನಿಮ್ಮನ್ನು ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿಲ್ಲ. ಪಟ್ಟಿಯಲ್ಲಾದದ್ದು ಕೇವಲ ಮುದ್ರಣ ದೋಷ (ಪ್ರಿಂಟ್ ಮಿಸ್ಟೇಕ್). ನೀವೇ ಅಧ್ಯಕ್ಷರಾಗಿ ಮುಂದುವರಿಯುತ್ತೀರಿ, ಯಾವುದೇ ಸಮಸ್ಯೆ ಇಲ್ಲ" ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಣ್ಣ ಪ್ರಕರಣದ ಹೋಲಿಕೆ

ಇತ್ತೀಚೆಗೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಚುನಾವಣಾ ಅಕ್ರಮದ ಬಗ್ಗೆ ನೀಡಿದ್ದ ಹೇಳಿಕೆಯು ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಇದರಿಂದಾಗಿ, ಹೈಕಮಾಂಡ್ ಅವರನ್ನು ಸಂಪುಟದಿಂದಲೇ ವಜಾಗೊಳಿಸಿತ್ತು. ಇದೇ ರೀತಿ, ಸರ್ಕಾರದ ವಿರುದ್ಧ ಮಾತನಾಡಿದ್ದ ರಾಜು ಕಾಗೆ ಅವರಿಗೂ ಹೈಕಮಾಂಡ್ ಶಾಕ್ ನೀಡಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಇದೀಗ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿರುವುದರಿಂದ, ಕಾಗೆ ಅವರ ಪದಚ್ಯುತಿಯ ಊಹಾಪೋಹಗಳಿಗೆ ತೆರೆ ಬಿದ್ದಿದೆ.  

Tags:    

Similar News