ಮುಂದುವರಿದ ಮಳೆ| ತುಂಬಿ ಹರಿಯುತ್ತಿರುವ ನದಿಗಳು; ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ
ಕೃಷ್ಣಾ ನದಿ ಮತ್ತು ಅದರ ಉಪನದಿಗಳಿಗೆ ಭಾರೀ ಪ್ರಮಾಣದ ನೀರಿನ ಒಳಹರಿವು ಮುಂದುವರಿದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದೆ.;
ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿ ಮತ್ತು ಅದರ ಉಪನದಿಗಳಿಗೆ ಭಾರೀ ಪ್ರಮಾಣದ ನೀರಿನ ಒಳಹರಿವು ಮುಂದುವರಿದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ 41 ಸೇತುವೆಗಳು , 300 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ
ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಕಡಿಮೆಯಾಗಿದೆ. ಹಲವಾರು ಅಣೆಕಟ್ಟುಗಳಿಂದ ನದಿಗೆ ನೀರು ಬಿಡಲಾಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ. ಪಟ್ಟಣದ ಇಸ್ಕಾನ್ ಕೇಂದ್ರಕ್ಕೆ ಮಲಪ್ರಭಾ ನದಿ ನೀರು ನುಗ್ಗಿದೆ. ಕೇಂದ್ರದಲ್ಲಿರುವ ವಿಗ್ರಹಗಳು ಮತ್ತು ಇತರ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಜಲಾವೃತವಾಗಿವೆ.
ಹುಕ್ಕೇರಿ ತಾಲೂಕಿನ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಸ್ತೆ ಜಲಾವೃತಗೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ನೀರು ಬಿಟ್ಟಿದ್ದರಿಂದ ಅಪಾರ ಪ್ರಮಾಣದ ಕೃಷಿಭೂಮಿ ಜಲಾವೃತವಾಗಿದೆ.
ಘಟಪ್ರಭಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿ ಗೋಕಾಕ ಪಟ್ಟಣದ 300ಕ್ಕೂ ಹೆಚ್ಚು ಕಟ್ಟಡಗಳು ಜಲಾವೃತವಾಗಿವೆ. ಹಿಡಕಲ್ ಡ್ಯಾಂನಿಂದ ನದಿಗೆ 44 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸಂತ್ರಸ್ತ ನಿವಾಸಿಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಹಿರಣ್ಯಕೇಶಿ ನದಿಯು ಸಂಕೇಶ್ವರ ಪಟ್ಟಣಕ್ಕೆ ನುಗ್ಗಿ ಹಲವಾರು ಮನೆಗಳನ್ನು ಆವರಿಸಿದೆ. ವೇದಗಂಗಾ ಮತ್ತು ದೂಧಗಂಗಾ ನದಿಗಳಲ್ಲಿ ಪ್ರವಾಹದಿಂದಾಗಿ ನಿಪ್ಪಾಣಿಯಲ್ಲಿ 220 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಬಾಗಲಕೋಟೆಯಲ್ಲಿ ತುಂಬಿ ಹರಿಯುತ್ತದ್ದ ಕೃಷ್ಣಾ ನದಿಯಲ್ಲಿ 54 ವರ್ಷದ ರೈತ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಿಬ್ಬಂದಿ ದೋಣಿಗಳನ್ನು ಬಳಸಿ ಹುಡುಕಾಟ ಆರಂಭಿಸಿದ್ದಾರೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭಾಧ್ರಾ ನದಿಯ ಒಳಹರಿವು ಹೆಚ್ಚುತ್ತಲೇ ಇದೆ.
ಗೋಕಾಕ್‌ನ ರಸ್ತೆಯೊಂದು ಪ್ರವಾಹದಿಂದ ಜಲಾವೃತಗೊಂಡಿದೆ.
ಕೊಡಗಿನಲ್ಲಿ ಕೊಂಚ ಬಿಡುವುಕಂಡ ಮಳೆ
ಕೊಡಗಿನಲ್ಲಿ ಶನಿವಾರ ಮಳೆ ಇಳಿಮುಖವಾಗಿದೆ. ಜಿಲ್ಲೆಯ ಕೆಲವೆಡೆ ನಿವಾಸಿಗಳು ಒಂದು ವಾರದ ನಂತರ ಬಿಸಿಲು ಕಂಡಿದ್ದಾರೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ವಿವಿಧೆಡೆ ಭೂಕುಸಿತ ಉಂಟಾಗಿದೆ. ಭಾರೀ ಗಾಳಿಗೆ 138 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮಡಿಕೇರಿ ನಗರಕ್ಕೆ ವಿದ್ಯುತ್ ಸರಬರಾಜಿನ ಮೇಲೆ ಪರಿಣಾಮ ಬೀರಿದೆ.
ಹಾಸನ ಜಿಲ್ಲೆಯಲ್ಲೂ ಮಳೆ ಕೊಂಚ ಬಿಡುವು ನೀಡಿತ್ತು. ಹೇಮಾವತಿ ನದಿಯ ಒಳಹರಿವು 50,000 ಕ್ಯುಸೆಕ್ ಇತ್ತು. ಸಕಲೇಶಪುರ ಹೊಳೆಮಲ್ಲೇಶ್ವರ ದೇಗುಲ ಜಲಾವೃತವಾಗಿದ್ದು, ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ವಾಹನಗಳು ಸಿಲುಕಿಕೊಂಡಿವೆ.
ಯಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಉಂಟಾಗಿದ್ದು, ಮಂಗಳೂರು-ಬೆಂಗಳೂರು ನಡುವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.