Fengal Cyclone | ಬೆಂಗಳೂರು ನಿಲ್ಲದ ಮಳೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆದ್ದಾರಿ ಕುಸಿತ
ಫೆಂಜಾಲ್ ಚಂಡಮಾರುತ ಪರಿಣಾಮ ಬೆಂಗಳೂರಿನಲ್ಲಿ ಮಂಗಳವಾರ ಕೂಡ ಮಳೆಯಾಗಿದೆ. ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಮತ್ತೆ ವರುಣ ಆರ್ಭಟ ಆರಂಭವಾಯಿತು.;
ಫೆಂಜಾಲ್ ಚಂಡಮಾರುತ ಪರಿಣಾಮ ಬೆಂಗಳೂರಿನಲ್ಲಿ ಮಂಗಳವಾರ ಕೂಡ ಮಳೆಯಾಗಿದೆ. ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಸುಮಾರು 1.15 ರ ವೇಳಗೆ ಮತ್ತೆ ವರುಣ ಆರ್ಭಟ ಆರಂಭವಾಯಿತು.
ಮೆಜೆಸ್ಟಿಕ್, ವಿಜಯನಗರ, ಚಾಮರಾಪೇಟೆ, ರಾಜಾಜಿನಗರ, ಬಿಬಿಎಂಪಿ ವೃತ್ತ, ಕೆ.ಆರ್. ಮಾರುಕಟ್ಟೆ, ಲಾಲ್ ಬಾಗ್, ಹೊರಮಾವು, ಬೆಳ್ಳಂದೂರು, ಬಾಗಲಗುಂಟೆ, ಹೆಬ್ಬಾಳ, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಮಡಿವಾಳ, ಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಆಗಿದೆ.
ವಾಟರ್‌ಲಾಗಿಂಗ್ ಸಮಸ್ಯೆಯಿಂದಾಗಿ ಬಿದ್ದ ಮಳೆ ನೀರು ರಸ್ತೆಗಳಲ್ಲಿ ಸರಾಗವಾಗಿ ಹರಿದು ಹೋಗದೆ ರಸ್ತೆಗಳು ಜಲಾವೃತಗೊಂಡಿತ್ತು. ಕೆಆರ್ ಮಾರುಕಟ್ಟೆ, ಕೆ.ಆರ್ ವೃತ್ತ, ಹೆಬ್ಬಾಳ ಜಂಕ್ಷನ್, ಸಿಲ್‌ಬೋರ್ಡ್, ಬಿಬಿಎಂಪಿ ವೃತ್ತದ ಸಿಗ್ನಲ್‌ಗಳಲ್ಲಿ ಜನದಟ್ಟಣೆ ಕಂಡು ಬಂತು.
ಮಂಗಳೂರು ಹೆದ್ದಾರಿ ಕುಸಿತ
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಮಂಗಳೂರಿನಲ್ಲಿ ಭಾರೀ ಮಳೆಗೆ ಅಪಾರ ಪ್ರಮಾಣದ ನೀರಿನಿಂದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ.
ಹೆದ್ದಾರಿ ಬದಿ ಗೇಲ್ ಗ್ಯಾಸ್ ಕಂಪನಿ ಕಾಮಗಾರಿಗಾಗಿ ಅಗೆದಿದ್ದ ಹೊಂಡದಲ್ಲಿ ನೀರು ತುಂಬಿ ಕೂಳೂರು ಬಳಿ ಮಂಗಳೂರು- ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಉಡುಪಿಯಿಂದ ಮಂಗಳೂರಿಗೆ ಬರುವ ವಾಹನ ಸವಾರರು ಪರದಾಡುತ್ತಿದ್ದಾರೆ. ಹೆದ್ದಾರಿ ಬದಿ ಗೇಲ್ ಗ್ಯಾಸ್ ಕಂಪನಿ ರಸ್ತೆ ಅಗೆದಿದ್ದರಿಂದ ಆ ಗುಂಡಿಯಲ್ಲೇ ಮಳೆ ನೀರು ಶೇಖರಣೆಗೊಂಡು ಹೆದ್ದಾರಿ ಕುಸಿದಿದೆ. ಬೈಕ್, ಕಾರು, ಲಾರಿಗಳು ಹಾದು ಹೋದ ಬಳಿಕ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದೆ.
ಪಿಲಿಕೂರು ಗೋಡೆ ಕುಸಿತ
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಬೃಹತ್ ತಡೆಗೋಡೆ ಕುಸಿದಿದೆ. ಯಾಸೀನ್ ಬೇಗ್ ಎಂಬವರ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದಿದ್ದದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ.
ಡಿಸೆಂಬರ್ 4ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 5 ಮತ್ತು 6ರಂದು ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಕಂಟ್ರೋಲ್ ರೂಂ ತೆರೆದಿದೆ. ಸಹಾಯಕ್ಕಾಗಿ ಕಂಟ್ರೋಲ್ ರೂಂ ನಂಬರ್ 08262 238950ಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ.